Saturday, July 27, 2024

Latest Posts

ಚುನಾಯಿತ ಜನಪ್ರತಿನಿಧಿಗಳಿಗೆ ಇಲ್ಲ ಆಸನದ ವ್ಯವಸ್ಥೆ…!

- Advertisement -

www.karnatakatv.net :ಹುಬ್ಬಳ್ಳಿ: ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಅಂತೂ ಆಯ್ಕೆಯಾದರು, ಆದರೆ  ಚುನಾಯಿತ ಪ್ರತಿನಿಧಿಗಳಿಗೆ ಕುಳಿತುಕೊಳ್ಳುವ ಆಸನಕ್ಕೆ ಅಡಚಣೆ ಉಂಟಾಗಿದೆ. ಕುರ್ಚಿಗಾಗಿ ಶತಾಯು ಗತಾಯು ಹೋರಾಟ ನಡೆಸಿದ ಅಭ್ಯರ್ಥಿಗಳಿಗೆ ಈಗ ಪಾಲಿಕೆಯಲ್ಲಿ ಕುಳಿತುಕೊಳ್ಳುವುದಕ್ಕೆ ಸಮಸ್ಯೆ ಎದುರಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಸರತ್ತು ಮುಗಿದು ನೂತನ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, 67ರಿಂದ 82ಕ್ಕೆ ಏರಿಕೆಯಾಗಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿನ ಹಳೇ ಸಭಾಭವನ ಇದೀಗ ಸಾಲದಾಗಿದೆ. ಪ್ರತಿ ತಿಂಗಳು ನಡೆಯುವ ಪಾಲಿಕೆಯ ಸಾಮಾನ್ಯ ಸಭೆಗಿಂತ ತಕ್ಷಣ ಜರುಗಬೇಕಿರುವ ಮೇಯರ್‌-ಉಪ ಮೇಯರ್ ಆಯ್ಕೆ ಚುನಾವಣೆಗೆ ಹೊಸ ಸ್ಥಳದ ಹುಡಕಾಟದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಸುಮಾರು 30 ತಿಂಗಳ ಬಳಿಕ ಹು-ಧಾ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಬಂದಿದೆ. ಬಿಜೆಪಿ 39, ಕಾಂಗ್ರೆಸ್ 33, ಪಕ್ಷೇತರರು 6, ಎಐಎಂಐಎಂ 3, ಜೆಡಿಎಸ್ 1 ಸ್ಥಾನಗಳಲ್ಲಿ ಜಯಿಸಿದೆ. ಇವರಿಗೆಲ್ಲ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸುವುದು ಹಳೇ ಸಭಾಭವನದಲ್ಲಿ ಸಾಧ್ಯವಿಲ್ಲ. ಮೇಯರ್-ಉಪ ಮೇಯರ್‌ ಆಯ್ಕೆ ವೇಳೆ ಮತಾಧಿಕಾರವಿರುವ ಸಂಸದರು, ಶಾಸಕರು ಭಾಗಿಯಾಗಬೇಕಾಗಿರುವುದರಿಂದ ಬೇರೆ ಸಭಾಭವನ ಹುಡುಕುವುದು ಅಧಿಕಾರಿಗಳಿಗೆ ಅನಿವಾರ್ಯವಾಗಿದೆ. ಹಾಲಿ ಸಭಾಭವನದಲ್ಲಿ 76 ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದ್ದು, ಅದು ಸಹ ತುಂಬಾ ಇಕ್ಕಟ್ಟಾಗಿದೆ.

ಹೊಸ ಸಭಾಭವನ ನಿರ್ಮಾಣಕ್ಕೆ ಇಂದಿಗೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. 2018ರಲ್ಲಿ ಪಾಲಿಕೆ ತನ್ನ ಅನುದಾನದಲ್ಲಿ ಇದಕ್ಕಾಗಿಯೇ 1 ಕೋಟಿ ರೂ. ಮೀಸಲಿಟ್ಟಿತ್ತು. ಸಂಪೂರ್ಣ 14 ಕೋಟಿ ರೂ. ವ್ಯಯಿಸುವಷ್ಟು ಪಾಲಿಕೆಯ ಆರ್ಥಿಕ ಸ್ಥಿತಿ ಸದೃಢವಾಗಿರಲಿಲ್ಲ. ಒಂದು ವೇಳೆ ಹಿಂದಿನ ಪ್ರಸ್ತಾವನೆಯನ್ನು ಪರಿಷ್ಕರಿಸಿ ಹೊಸದಾಗಿ ಪ್ರಸ್ತಾವನೆ ತಯಾರಿಸಿದರೆ ಮುಂದಿನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ. ಹೊಸ ಪ್ರಸ್ತಾವನೆಗೆ – ಸರ್ಕಾರದಿಂದ ಅನುಮೋದನೆ ಪಡೆದು ನೂತನ ಸಭಾಭವನ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲು 2-3 ವರ್ಷಗಳೇ ಬೇಕಾಗುತ್ತದೆ. ಅಲ್ಲಿಯವರೆಗೆ ಪಾಲಿಕೆಯ ಸಾಮಾನ್ಯ ಸಭೆಯನ್ನು ಬೇರೆ ಸ್ಥಳದಲ್ಲಿ ಮಾಡಬೇಕಾಗುತ್ತದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss