ಹಾವೇರಿ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಇರುವುದಿಲ್ಲ. ಸಾಕಷ್ಟು ಯೂರಿಯಾ ಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿದೆ. ರೈತರು ಆತಂಕ ಪಡುವ ಅವಶ್ಯವಿಲ್ಲ ಎಂದು ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಭೆಯಲ್ಲಿ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯಲ್ಲಿ ಈ ಸಂಜೆಯೊಳಗಾಗಿ 7,550 ಮೆಟ್ರಿಕ್ ಟನ್ ಯೂರಿಯಾ ಬರಲಿದೆ. ಒಂದು ವಾರದೊಳಗಾಗಿ ವಿವಿಧ ಕಂಪನಿಯಿಂದ 15,000 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಜಿಲ್ಲೆಗೆ ಬರಲಿದೆ. ಈಗಾಗಲೇ ಅಗತ್ಯ ದಾಸ್ತಾನು ಸಹ ಮಾಡಿಕೊಳ್ಳಲಾಗಿದೆ. ಯಾವ ರೈತರು ಆತಂಕಪಡುವ ಅಗತ್ಯ ಇಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ನಿಗಧಿತ ಪೂರೈಕೆಗಿಂತ 9000 ಸಾವಿರ ಟನ್ ಯೂರಿಯಾ ಜಿಲ್ಲೆಗೆ ಬಂದಿದೆ ಎಂದು ಹೇಳಿದರು.
ಶಿಗ್ಗಾಂವಿಯಲ್ಲಿ ಯೂರಿಯಾ ಗೊಬ್ಬರ ಅಭಾವ ಕುರಿತಂತೆ ಈಗಾಗಲೇ ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.ಮಂಗಳವಾರ ಸಂಜೆಯೊಳಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.ರೈತರಿಗೆ ಗೊಬ್ಬರದ ಅಭಾವವಾಗಂದತೆ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮಾತನಾಡಿ, ಗೊಬ್ಬರ ಮಾರಾಟಗಾರರು ಅಧಿಕ ಲಾಭದ ದೃಷ್ಟಿಯಿಂದ ರೈತರಿಗೆ ಲಿಂಕ್ ಆಧಾರದಲ್ಲಿ ಯೂರಿಯಾ ಗೊಬ್ಬರದ ಜೊತೆ ಜಿಂಕ್ ಸೇರಿ ಯಾವುದೇ ಇತರ ಗೊಬ್ಬರವನ್ನು ಲಿಂಕ್ ಮಾಡಿ ವಿತರಿಸುವಂತಿಲ್ಲ. ವಿತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಅಭಾವ ಉಂಟಾಗಿಲ್ಲ. ಇನ್ನೂ ಮೂರು ದಿನಗಳಲ್ಲಿ ಜಿಲ್ಲೆಗೆ ಮದ್ರಾಸ್ ಫರ್ಟಿಲೈಜರ್ ಲಿಮಿಟೆಡ್ ನಿಂದ 700ಟನ್,ನ್ಯಾಷನಲ್ ಫರ್ಟಿಲೈಜರ್ ನಿಂದ 1,900 ಟನ್, ಇಫ್ಕೋದಿಂದ 1,300ಟನ್, ಸ್ಪಿಕ್‍ನಿಂದ 1,250ಟನ್ ಸೇರಿದಂತೆ ಇತರ ಮೂಲಗಳಿಂದ ಜುಲೈ 14ರಂದು ಒಟ್ಟು 7,550 ಟನ್ ಯೂರಿಯಾ ಗೊಬ್ಬರ ಜಿಲ್ಲೆಗೆ ಸರಬರಾಜು ಆಗಲಿದೆ. ಅರ್ಧ ಲೀಟರ್ ದ್ರವರೂಪದ ಪರಿಸರ ಸ್ನೇಹಿ “ನ್ಯಾನೋ ಯೂರಿಯಾ” ಒಂದು ಚೀಲ ಯೂರಿಯಾ ಗೊಬ್ಬರಕ್ಕೆ ಸಮ. ರೈತರಿಗೆ ಅದು ಕೇವಲ 250 ರೂಪಾಯಿಗಳಿಗೆ ದೊರೆಯುತ್ತದೆ. ರೈತರು ಯೂರಿಯಾ ಬಳಕೆ ಕಡಿಮೆ ಮಾಡಿ ಭೂಮಿಯ ಫಲವತ್ತತೆಯನ್ನು ಉಳಿಸಬೇಕು ಎಂದರು.




