ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಹ ಸಮೀಕ್ಷೆಯ ಮೇಲೆ ತೀವ್ರ ಟೀಕೆ ಮಾಡಿದ್ದಾರೆ. ಮೊದಲು ಪ್ರವಾಹ ಸಂತ್ರಸ್ತರಿಗೆ ಪರಿಹಾರ ಘೋಷಿಸಿ, ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಪರಿಹಾರವನ್ನೇ ತಿಳಿಸದೆ ಕೇವಲ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅಶೋಕ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ ಅಶೋಕ್, ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಸಿಎಂ ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ಮಾಡಿದ್ದಾರೆ. ಎಲ್ಲಾ ರಸ್ತೆಗಳಲ್ಲಿ ಗುಂಡಿ ಇರುವುದರಿಂದ, ಜನರಿಂದ ಪ್ರತಿಭಟನೆ ಎದುರಾಗುವ ಭಯದಿಂದಲೇ ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಬೆಳೆ ಹಾನಿ, ಮನೆ ಹಾನಿ, ಶಾಲೆಗಳ ಹಾನಿಗೆ ಎಷ್ಟು ಪರಿಹಾರ ಸಿಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕಿತ್ತು. ಆದರೆ ಈವರೆಗೆ ಯಾವುದೇ ಘೋಷಣೆ ಇಲ್ಲ. ಒಂದೆಡೆ ಸರ್ಕಾರದ ಖಜಾನೆ ಖಾಲಿ, ಮತ್ತೊಂದೆಡೆ ಕೇಂದ್ರದ ವಿರುದ್ಧ ಆರೋಪ ಮಾಡಲು ಮಾತ್ರ ಸಿದ್ದತೆ. ಸಂತ್ರಸ್ತರ ನೆರವಿಗೆ ಸಚಿವರ ತಂಡ ರಚಿಸಬೇಕಿತ್ತು, ಅಧಿಕಾರಿಗಳ ಸಭೆ ನಡೆಸಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕಿತ್ತು. ಪುನರ್ವಸತಿ ಕೇಂದ್ರಗಳಲ್ಲಿ ಆಹಾರ ಸರಿಯಾಗಿ ಸಿಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಕೇವಲ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ಅಸ್ಥಿರವಾಗುವ ಸೂಚನೆಗಳಿವೆ ಎಂದು ಅಶೋಕ್ ಅಭಿಪ್ರಾಯಪಟ್ಟರು. ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಕ್ರಾಂತಿ ಸಾಧ್ಯತೆ ಇದೆ. ಅದರ ನಂತರ ಮುಖ್ಯಮಂತ್ರಿ ಬದಲಾವಣೆ ಖಚಿತ. ಸರ್ಕಾರ ಬಿದ್ದು ಹೋದರೆ ಚುನಾವಣೆ ನಡೆಯುವುದು ಸೂಕ್ತ. ನಾವು ಕಾಂಗ್ರೆಸ್‌ನಂತೆ ಸರ್ಕಾರ ಬೀಳಿಸಲು ಹೋಗುವುದಿಲ್ಲ. ಆದರೆ, ಎರಡೂವರೆ ವರ್ಷ ಕಳೆದರೂ ಈ ಸರ್ಕಾರ ಟೇಕಾಫ್ ಆಗಿಲ್ಲ. ಕಾಂಗ್ರೆಸ್ ಶಾಸಕರು, ಸಚಿವರೇ ಅಭಿವೃದ್ಧಿ ಆಗಿಲ್ಲವೆಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದೇ ಉತ್ತಮ ಎಂದು ಹೇಳಿದರು.
ಬೆಂಗಳೂರು ರಸ್ತೆಗಳ ಸ್ಥಿತಿಯ ಬಗ್ಗೆ ಮಾತನಾಡಿದ ಅಶೋಕ್, ಗರದ ಗುಂಡಿಗಳು ಸಾವಿನ ಗುಂಡಿಗಳಾಗಿವೆ. ಇತ್ತೀಚೆಗೆ ಒಬ್ಬ ಯುವತಿ ರಸ್ತೆ ಗುಂಡಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸಾವಿಗೆ ಕಾರಣ ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಬೈಕ್‌ನಲ್ಲಿ ಓಡಾಡಿದರೂ, ಸಿಎಂ ನಗರ ಪ್ರದಕ್ಷಿಣೆ ಮಾಡಿದರೂ ಫಲಿತಾಂಶವಿಲ್ಲ. ಬಿಜೆಪಿ ಅವಧಿಯಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ನಂತರ ಗುಂಡಿಗಳು ಉಂಟಾದರೂ ಈ ಸರ್ಕಾರ ದುರಸ್ತಿ ಮಾಡಿಲ್ಲ ಎಂದು ದೂರು ನೀಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ