ಹೆಸರು ಕಾಳು ಬೆಳೆಗೆ ಸಿಗದ ಬೆಂಬಲ ಬೆಲೆ: ಖರೀದಿ ಕೇಂದ್ರಗಳಿಲ್ಲದೇ ರೈತರು ಕಂಗಾಲು

Hubli News: ಹುಬ್ಬಳ್ಳಿ: ಕಳೆದ ವರ್ಷ ಭೀಕರ ಬರಗಾಲದಿಂದ ಕೈ ಸುಟ್ಟುಕೊಂಡಿದ್ದ ಹೆಸರು ಬೆಳೆಗಾರರಿಗೆ ಈ ವರ್ಷ ಸ್ವಲ್ಪ ಉತ್ತಮ ಇಳುವರಿ ಬಂದಿದ್ದರೂ ಅದನ್ನು ಬೆಂಬಲ ಬೆಲೆಯಲ್ಲಿ ಮಾರಬೇಕೆಂದರೆ ಖರೀದಿ ಕೇಂದ್ರಗಳೇ ಕಾರ್ಯಾರಂಭವಾಗುತ್ತಿಲ್ಲ. ಇದು ಧಾರವಾಡ ಜಿಲ್ಲೆಯ ರೈತರನ್ನು ಕಂಗಾಲು ಮಾಡಿದೆ.

ಹೌದು, ಧಾರವಾಡ ಜಿಲ್ಲೆಯಲ್ಲಿ ಈ ವರ್ಷ 94.806 ಹೆಕ್ಟರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಇದರಲ್ಲಿ ರೈತನ ಕೈಗೆ ಶೇ.32 ರಷ್ಟು ಹೆಸರು ಬೆಳೆ ಕೈ ಸೇರುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಹೆಸರನ್ನು ಮಾರಾಟ ಮಾಡುವ ಯೋಚನೆಯಲ್ಲಿ ರೈತರಿದ್ದಾರೆ. ಹೀಗಿದ್ದರೂ ಸಹ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳು ತೆರೆಯದೇ ಇರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ರೈತರು ಒಂದು ಎಕರೆ ಹೆಸರು ಬೆಳೆಗೆ ಕನಿಷ್ಠ 10 ಸಾವಿರದಿಂದ 12 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಇದೀಗ ಉತ್ತಮ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಂತರ ಮಳೆ, ರೋಗಭಾದೆ ಇಳುವಳಿ ಕುಂಠಿತಗೊಳಿಸಿವೆ. ಇದರ ಮಧ್ಯೆ ಅಷ್ಟಿಷ್ಟು ಬೆಳೆದ ಹೆಸರು ಕಾಳಿನ ದರ ದಿಢೀರ್ ಕುಸಿತವಾಗಿದ್ದು, ರೈತರಿಗೆ ಆಘಾತವನ್ನು ಉಂಟುಮಾಡಿದೆ.

ಮೊದಲು ಪ್ರತಿಕ್ವಿಂಟಾಲ್ ಹೆಸರಿಗೆ 8300-8700 ರೂವರೆಗೆ ಮಾರಾಟವಾಗಿದೆ. ಅದರಲ್ಲಿ ಕೈಯಿಂದ ಬಿಡಿಸಿದ ಕಾಳುಗಳಿಗೆ ಅತಿಹೆಚ್ಚು ಬೇಡಿಕೆಯಿತ್ತು. ಮಷಿನ್ ಕಟಿಂಗ್ ಮಾಡಿದ ಕಾಳು ಒಂದು ಸಾವಿರ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದವು. ಆದರೆ ಕಳೆದ ಒಂದು ವಾರದಿಂದ ಹೆಸರು ಕಾಳು ಧಾರಣೆ ಉತ್ತರ ಕರ್ನಾಟಕದ ದೊಡ್ಡ ಕೃಷಿ ಮಾರುಕಟ್ಟೆಗಳಾದ ಹುಬ್ಬಳ್ಳಿ ಹಾಗೂ ಗದಗ ಮಾರುಕಟ್ಟೆಯಲ್ಲಿ ಅರ್ಧದಷ್ಟು ಬೆಲೆ ಇಳಿಕೆಯಾಗಿದೆ.

ಸದ್ಯ ಪ್ರತಿ ಕ್ವಿಂಟಾಲ್’ಗೆ 4000-6000ಕ್ಕೆ ರೈತರ ಬೆಳೆಯನ್ನು ಖರೀದಿಸಲು ದಲ್ಲಾಳಿಗಳು ಕೇಳುತ್ತಿದ್ದಾರೆ. ಹೀಗಾಗಿ ರೈತರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಹೆಸರಿಗೆ 86082 ನಿಗಧಿಪಡಿಸಿದೆ. ಆದರೆ ಬೆಳೆ ಬಂದರೂ ಸಹ ಜಿಲ್ಲೆಯಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಿಲ್ಲ. ಇದರಿಂದ ರೈತರು ತಾವು ಬೆಳೆದ ಹೆಸರು ಕಾಳಿಗೆ ಸರಿಯಾದ ಬೆಲೆ ಸಿಗದೇ ಬೆಲೆಯಾಗಿ ಕಾಯುತ್ತಿದ್ದಾರೆ.

ಕಾಳು ರಕ್ಷಣೆಗೆ ತೊಡಗಿದ ರೈತರು: ಖರೀದಿ ಕೇಂದ್ರದ ಆರಂಭವಾಗದ ಹಿನ್ನೆಲೆ ರೈತರು ಕಾಳು ರಕ್ಷಣೆ ಮಾಡಿಕೊಳ್ಳುವುದು ತಲೆನೋವಾಗಿದೆ. ಹೀಗಾಗಿ ತಾವು ಬೆಳೆದ ಹೆಸರು ಕಾಳುಗಳನ್ನು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹಾಕಿ, ಕಾಳುಗಳನ್ನು ಒಣಗಿಸುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯ ಎನಿಸಿವೆ.‌

ಈ ಬಗ್ಗೆ ರೈತರಾದ ಬಸವರಾಜ ಯೋಗಪ್ಪನವರ ಮಾತನಾಡಿದ್ದು, ರೈತನ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಎಕರೆಗೆ 1-2 ಚೀಲ ಮಾತ್ರ ಹೆಸರು ಕಾಳು ಬಂದಿವೆ. ಮೊದಲೇ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯಲಾಗಿದೆ. ಆದರೆ ಸರ್ಕಾರಗಳು ಘೋಷಣೆ ಮಾಡಿರುವ ಬೆಂಬಲ ಬೆಲೆ ಮಾತ್ರ ರೈತನಿಗೆ ತಲುಪುತ್ತಿಲ್ಲ. ಸದ್ಯ ಮಾರುಕಟ್ಟೆಯಲ್ಲಿ 3500-4000 ರೂಪಾಯಿಗೆ ಕಾಳುಗಳನ್ನು ಕೇಳುತ್ತಿದ್ದಾರೆ. ಇದನ್ನು ನೋಡಿದರೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ಉಳಿದಿದೆ. ಈಗಲಾದರೂ ಸರ್ಕಾರ ಘೋಷಣೆ ಮಾಡಿದಂತೆ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು‌.‌ ರೈತನನ್ನು ಉಳಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಪ್ರತಿಕ್ರಿಯೆ ನೀಡಿದ್ದು, ಜಿಲ್ಲೆಯಲ್ಲಿ ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆಯಾಗಿದೆ. ಹೀಗಾಗಿ ಕಟಾವು ಪ್ರಕ್ರಿಯೆ ಕೂಡಾ ನಡೆದಿದೆ. ಖರೀದಿ ಕೇಂದ್ರ ಆರಂಭಕ್ಕೆ ರೈತರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಖರೀದಿ ಕೇಂದ್ರ ಆರಂಭಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಪ್ಪಿಗೆ ಸಿಕ್ಕತಕ್ಷಣ ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದರು.

ಒಟ್ಟಿನಲ್ಲಿ ಉತ್ತಮ ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆ ಕುಸಿತ ಶಾಕ್ ನೀಡಿದೆ. ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವ ಮೂಲಕ ರೈತನಿಗೆ ನೇರವಾಗುವ ಕೆಲಸ ಮಾಡಬೇಕಿದೆ.

About The Author