Tuesday, October 7, 2025

Latest Posts

ಮಳೆಗೆ ತತ್ತರಿಸಿದ ‘ಉತ್ತರ ಕರ್ನಾಟಕ’, ಮಳೆ ಅಬ್ಬರ – ಪ್ರವಾಹ, ಭೂಕುಸಿತ!

- Advertisement -

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ವಿಜಯಪುರದಿಂದ ಉತ್ತರ ಕನ್ನಡವರೆಗೆ, ಬಳ್ಳಾರಿಯಿಂದ ಬಾಗಲಕೋಟೆಯವರೆಗೆ ಗ್ರಾಮೀಣ ಭಾಗದ ಜನತೆ ಮಳೆ ಆರ್ಭಟದಿಂದ ಪರದಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಹಲವೆಡೆ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಂಗಳವಾರದಿಂದ ಇಂದಿನವರೆಗೂ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನವನ್ನೇ ಅಸ್ತವ್ಯಸ್ತ ಮಾಡಿಬಿಟ್ಟಿದೆ. ಬುಧವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಮೇಲೆ ಮರಗಳು ಬಿದ್ದು, ವಿದ್ಯುತ್ ಲೈನ್ ಗಳು ಹಾಳಾಗಿವೆ. ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಲ್ಲಕವಟಗಿ-ವಿಜಯಪುರ ರಸ್ತೆಯ ಸಂಗಮನಾಥ ದೇವಸ್ಥಾನದ ಬಳಿ ಉಕ್ಕಿ ಹರಿಯುವ ಹೊಳೆಯ ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಬೈಕ್ ಸವಾರನೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 19 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಹುನಗುಂದ ಮತ್ತು ಇಳಕಲ್ ಪಟ್ಟಣಗಳಲ್ಲಿ ಭಾರೀ ಮಳೆಯಾಗಿದೆ. ನೆಲದ ಮಟ್ಟದ ಮನೆಗಳಿಗೆ ನೀರು ನುಗ್ಗಿ ಹಲವು ಜನರು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ತೆರಳಿದ್ದಾರೆ. ಬೆಳಗಾವಿ ಜಿಲ್ಲೆಯ ಚಂದನಹೊಸೂರಿನಲ್ಲಿ 48 ವರ್ಷದ ವ್ಯಕ್ತಿ ಒಂದು ಹೊಳೆ ದಾಟುವಾಗ ನದಿಯ ಪ್ರವಾಹಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ. ಶೋಧ ಕಾರ್ಯಗಳು ಮುಂದುವರೆದಿವೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ವರುಣನ ಅಬ್ಬರ ಹೆಚ್ಚಿದ್ದು, ಗುಂಡಬಾಳ ನದಿ ಉಕ್ಕಿ ಹರಿಯುತ್ತಿದೆ. ನದಿಕಡೆಯ ಹಳ್ಳಿಗಳ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮನೆಬಿಟ್ಟು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ತಾಲ್ಲೂಕಿನ ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಕೆಲವು ರಸ್ತೆಗಳು ಸಂಪೂರ್ಣ ಮುಚ್ಚಲ್ಪಟ್ಟಿವೆ. ರಸ್ತೆಗಳ ಮೇಲೆ ಮಣ್ಣು, ಬಂಡೆಗಳು ಬಿದ್ದಿರುವ ದೃಶ್ಯಗಳು ಕಂಡುಬರುತ್ತಿವೆ.

ಬಳ್ಳಾರಿ ಜಿಲ್ಲೆಯ ನಾರಿಹಳ್ಳ ಅಣೆಕಟ್ಟಿನಿಂದ ನೀರು ಬಿಡುಗಡೆಗೊಳ್ಳುತ್ತಿದ್ದಂತೆ, ಸುಮಾರು 200 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಹತ್ತಿ, ಭತ್ತ ಹಾಗೂ ಜೋಳದ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡು ನಾಶವಾಗಿವೆ.

ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಯಲ್ಲೂ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಈರುಳ್ಳಿ ಬೆಳೆಗಳು ಕೂಡ ಕೊಚ್ಚಿ ಹೋಗಿರುವ ವರದಿಯಾಗಿದೆ. ಕೃಷಿಕರು ಆತಂಕದಲ್ಲಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಹಾನಿ ಅಂದಾಜು ಆರಂಭಿಸಿದ್ದಾರೆ. ಹವಾಮಾನ ಇಲಾಖೆ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss