ರೈಲ್ವೆ ಪ್ರಯಾಣಿಕರೇ ಗಮನಿಸಿ: ಬೆಂಗಳೂರು ವಿಭಾಗದ ರೈಲ್ವೆ ನಿಲ್ದಾಣಗಳಲ್ಲಿ ಡಿಜಿಟಲ್ ಸ್ಮಾರ್ಟ್ ಲಾಕರ್‌ ವ್ಯವಸ್ಥೆ

ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ದಂಡು ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲೋಕ್ ರೂಮ್‌ಗಳ (ಡಿಜಿಲಾಕರ್ಸ್) ಗುತ್ತಿಗೆಯನ್ನು ಹೊಸ, ನವೀನ ಶುಲ್ಕೇತರ ಆದಾಯ ಕಲ್ಪನೆ ಯೋಜನೆ (New, Innovative Non-Fare Revenue Ideas Scheme-NINFRIS) ಅಡಿಯಲ್ಲಿ ಮಂಜೂರು ಮಾಡಿದೆ.

ರೈಲ್ವೆಯಲ್ಲಿನ ಈ ಯೋಜನೆಯು ಸುರಕ್ಷಿತ ಲಾಕರ್‌ಗಳು, ಡಿಜಿಟಲ್ ಪಾವತಿ ಸೌಲಭ್ಯದ ಮೂಲಕ ಸುಧಾರಿತ ಕ್ಲೋಕ್‌ರೂಮ್ ಸೇವೆಯನ್ನು ಒದಗಿಸುವುದರ ಜೊತೆಗೆ ರೈಲ್ವೆಗೆ ಶುಲ್ಕೇತರ ಆದಾಯವನ್ನು ನೀಡುತ್ತದೆ.

ಈ ಡಿಜಿ-ಕ್ಲೋಕ್ ರೂಮ್‌ಗಳು ಪ್ರಯಾಣಿಕರಿಗೆ ತಮ್ಮ ಲಗೇಜ್‌ಗಳನ್ನು ಕೈಯೆಡೆಯಾಗಿಡಲು ಹೆಚ್ಚಿನ ಸುರಕ್ಷತೆ ಮತ್ತು ಅನುಕೂಲತೆಯನ್ನು ನೀಡುತ್ತದೆ ಎಂದು ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ. ಪ್ರಯಾಣಿಕರು KLOAK ಆಪ್ ಬಳಸಿಕೊಂಡು ಲಾಕರ್‌ಗಳನ್ನು ಸ್ವತಃ ನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಪಾವತಿಗಳು ಸೇರಿದಂತೆ ಎಲ್ಲಾ ಕಾರ್ಯಾಚರಣೆಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ಸ್ಮಾರ್ಟ್ ಫೋನ್ ಇಲ್ಲದ ಪ್ರಯಾಣಿಕರಿಗೆ ಸಹಾಯ ಮಾಡಲು ಲಾಕರ್‌ಗಳ ಬಳಿ ನಿರ್ವಾಹಕರನ್ನು ಇರಿಸಲಾಗುತ್ತದೆ.

ಸ್ಟೌನೆಸ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಒಂದು ವರ್ಷದ ಅವಧಿಗೆ ಪರವಾನಗಿ ನೀಡಲಾಗಿದೆ. ಪರವಾನಗಿಯನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಬಹುದು.

 

About The Author