ಚಿನ್ನಯ್ಯ ಖಾತೆಗೆ ಹಣ ಹಾಕಿದವರಿಗೆ ನೋಟಿಸ್!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಚಿನ್ನಯ್ಯ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಹೊಸ ತಿರುವು ಪಡೆದಿದೆ. ಸದ್ಯ ಈ ಪ್ರಕರಣದಲ್ಲಿ ಮಾಸ್ಕ್ ಧರಿಸಿದ ಚಿನ್ನಯ್ಯ ನೀಡಿದ ಭಾರಿ ಹೇಳಿಕೆಗಳ ಆಧಾರದ ಮೇಲೆ ತನಿಖೆ ಚುರುಕುಗೊಂಡಿದೆ. ಇದೀಗ ಈ ಕೇಸ್‌ಗೆ ಸಂಬಂಧಪಟ್ಟಂತೆ ಪ್ರಮುಖ ಅಪ್ಡೇಟ್ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಿನ್ನಯ್ಯನಿಗೆ ಆರ್ಥಿಕ ಸಹಾಯ ನೀಡಿದ್ದವರಿಗೂ ಇದೀಗ ಸಂಕಷ್ಟ ಎದುರಾಗಿದೆ. ಎಸ್‌ಐಟಿ ಅಧಿಕಾರಿಗಳು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದ ಹಲವು ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಿಶೇಷವಾಗಿ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಚಿನ್ನಯ್ಯ ಹಾಗೂ ಆತನ ಪತ್ನಿಯ ಖಾತೆಗೆ ಹಣ ಹಾಕಿದವರು ಈಗ ವಿಚಾರಣೆಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಪೊಲೀಸರು ಈಗಾಗಲೇ ಚಿನ್ನಯ್ಯನ ಬ್ಯಾಂಕ್ ಖಾತೆಯ ಡಿಟೇಲ್ಸ್ ಪಡೆದುಕೊಂಡಿದ್ದಾರೆ. ₹3 ಲಕ್ಷಕ್ಕಿಂತ ಹೆಚ್ಚಿನ ಹಣ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜಮೆಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಹಣದ ಮೂಲ ಎಲ್ಲಿ? ಯಾರಿಂದ ಬಂದಿದೆ? ಏಕೆ ಬಂತು? ಎಂಬ ಪ್ರಶ್ನೆಗಳತ್ತ ಎಸ್‌ಐಟಿ ಗಂಭೀರವಾಗಿ ಗಮನಹರಿಸಿದೆ. ಈ ಹಣಕಾಸು ವ್ಯವಹಾರಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುವ ಮೂಲಕ ಪ್ರಕರಣದ ವ್ಯಾಪ್ತಿ ಮತ್ತು ಸಂಬಂಧಿಕರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ.

ಚಿನ್ನಯ್ಯನ ಪತ್ನಿಗೂ ಈ ಹಣ ವಹಿವಾಟುಗಳ ಸಂಬಂಧವಿದೆ ಎಂಬ ನಿರ್ಧಾರಕ್ಕೆ ಬಂದಿರುವ ಎಸ್‌ಐಟಿ, ಇದೀಗ ಪ್ರಕರಣವನ್ನು ಮತ್ತಷ್ಟು ಆಳವಾಗಿ ತನಿಖೆ ನಡೆಸಲು ಸಜ್ಜಾಗಿದೆ. ಈಗ ಈ ತನಿಖೆ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ಬೆಳಕು ಚೆಲ್ಲಬಹುದೆಂದು ನಿರೀಕ್ಷೆ ವ್ಯಕ್ತವಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author