Sunday, October 5, 2025

Latest Posts

ರಾಜಕೀಯದಲ್ಲಿ ನವೆಂಬರ್​ ಕ್ರಾಂತಿ? ಸುರ್ಜೇವಾಲ ಸ್ಫೋಟಕ ಹೇಳಿಕೆ

- Advertisement -

ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿರುವ ನವೆಂಬರ್ ಕ್ರಾಂತಿ ಕುರಿತು ಸಿಎಂ ಹಾಗೂ ಡಿಸಿಎಂ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದೊಳಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ನಂತರ ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುರ್ಜೇವಾಲಾ, ಪಕ್ಷದ ಶಿಸ್ತು ಎಲ್ಲರಿಗೂ ಅನ್ವಯಿಸುತ್ತದೆ. ಯಾರೂ ಪಕ್ಷದ ಚೌಕಟ್ಟು ಮೀರಬಾರದು ಎಂಬ ಸ್ಪಷ್ಟ ಸೂಚನೆ ನೀಡಲಾಗಿದೆ. ಆದಾಗ್ಯೂ, ಕೆಲವರು ಅದನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಮತಗಳ್ಳತನ ಆರೋಪಗಳ ಕುರಿತೂ ಅವರು ಪ್ರತಿಕ್ರಿಯಿಸಿದ್ದು, ಮಹದೇವಪುರ ಮತ್ತು ಆಳಂದ ಕ್ಷೇತ್ರಗಳಷ್ಟೇ ಅಲ್ಲ, ಇನ್ನೂ ಅನೇಕ ಕ್ಷೇತ್ರಗಳಲ್ಲೂ ಮತಗಳ್ಳತನ ನಡೆದಿದೆ. ಮಹಾರಾಷ್ಟ್ರದಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿರುವುದನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆಗಳ ಮೂಲಕ ಬಹಿರಂಗಪಡಿಸಿದ್ದಾರೆ. ಬಿಜೆಪಿ ಸಂವಿಧಾನ ನೀಡಿದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ವೋಟ್ ಚೋರಿ ವಿರುದ್ಧ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.

ಈ ಅಭಿಯಾನದ ಭಾಗವಾಗಿ ರಾಜ್ಯ ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಪುಲಕೇಶಿನಗರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಸಿದ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಕೂಡ ಉಪಸ್ಥಿತರಿದ್ದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss