ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆ ಎಂಬುದನ್ನು ಫಿಕ್ಸ್ ಮೈ ಸ್ಟ್ರೀಸ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಿ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಸಲುವಾಗಿ ಅಭಿವೃದ್ಧಿಪಡಿಸಿರುವ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿಗಳು ಯಾವ ರಸ್ತೆಯಲ್ಲಿ ಗುಂಡಿಗಳಿವೆ, ಎಷ್ಟು ಗುಂಡಿಗಳಿವೆ ಎಂಬುದನ್ನು ಜಿಯೋ ಲೊಕೇಷನ್ ಉಳ್ಳ ಛಾಯಾಚಿತ್ರಗಳನ್ನು ಆ್ಯಪ್ ನಲ್ಲಿ ಅಪ್ಲೋಡ್ ಮಾಡಬೇಕು. ಆ ಬಳಿಕ ರಸ್ತೆ ಗುಂಡಿ ಸುತ್ತಳತೆ ಪರಿಶೀಲಿಸಿ ಪಾಲಿಕೆಯ ಬ್ಯಾಚ್ ಮಿಕ್ಸ್ ಪ್ಲಾಂಟ್ ನಿಂದ ಡಾಂಬರು ಪಡೆದು ಗುತ್ತಿಗೆದಾರರ ಮೂಲಕ ನಿಯಮಾನುಸಾರ ಗುಂಡಿಯ ನಾಲ್ಕು ಭಾಗವನ್ನು ಕತ್ತಿರಿಸಿ ಗುಣಮಟ್ಟವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಯಾವುದೇ ರಸ್ತೆಗುಂಡಿಗಳು ಇಲ್ಲದಂತೆ ನೋಡಿಕೊಳ್ಳಬೇಕು. ಪೈಥಾನ್ ಯಂತ್ರದ ಮೂಲಕ ರಸ್ತೆಗುಂಡಿಗಳನ್ನು ನಿರ್ವಹಿಸಲು 182 ಕಿ.ಮೀ ಉದ್ದದ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಯನ್ನು ನೀಡಲಾಗಿದ್ದು, ಸಮರ್ಪಕ ರೀತಿಯಲ್ಲಿ ಯಾವುದೇ ರಸ್ತೆ ಗುಂಡಿಗಳಿಲ್ಲದಂತೆ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿರುವ ರಸ್ತೆಗಳ ಪೈಕಿ ಇನ್ನೂ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸದಿರುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ದೋಷ ಮುಕ್ತ ಅವಧಿ(ಡಿಎಲ್ಪಿ)ಯಿರುವ ರಸ್ತೆಗಳನ್ನು ಗುತ್ತಿಗೆದಾರರ ಮೂಲಕವೇ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶೇ. 37 ರಷ್ಟು ರಸ್ತೆ ಗುಂಡಿಗಳನ್ನು ಪರಿಶೀಲಿಸಿ:
ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಗಣಕೀಕೃತ ಮಾಹಿತಿಯನ್ನು ಆಯಾ ವಲಯಾನುಸಾರ ಒಟ್ಟು ಮುಚ್ಚಿರುವ ಗುಂಡಿಗಳಲ್ಲಿ ಶೇ. 1 ರಷ್ಟು ವಲಯ ಆಯುಕ್ತರು, ಶೇ. 5 ರಷ್ಟು ಮುಖ್ಯ ಇಂಜಿನಿಯರ್ ಗಳು, ಶೇ. 30 ರಷ್ಟು ಕಾರ್ಯಪಾಲಕ ಇಂಜಿನಿಯರ್ ಗಳು ಪರಿಶೀಲನೆರ್ಯಾಂಡಮ್ ಚೆಕ್) ನಡೆಸುವಂತೆ ಆ್ಯಪ್ ನಲ್ಲಿ ವ್ಯವಸ್ಥೆ ಕಲ್ಪಿಸಬೇಕೆಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವುದನ್ನು ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ನಲ್ಲಿ ನಾಗರೀಕರು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಪಿ.ಎನ್ . ರವೀಂದ್ರ, ಇಂಜಿನಿಯರ್ ವಿಭಾಗದ ಮುಖ್ಯಸ್ಥರಾದ ವಿಶ್ವನಾಥ್ (ಪ್ರಭಾರ), ರಸ್ತೆ ಮೂಲಭೂತ ಸೌಕರ್ಯ/ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಗಳು, ಎಲ್ಲಾ ವಲಯ ಮುಖ್ಯ ಇಂಜಿನಿಯರ್ ಗಳು, ಕಾರ್ಯಪಾಲಕ ಇಂಜಿನಿಯರ್ ಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.




