ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟು, ಅದರ ಬದಲಿಗೆ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್’ (ವಿಜಿ–ಜಿ ರಾಮ್–ಜಿ) ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಹೊಸ ಮಸೂದೆ ಸಿದ್ಧಪಡಿಸಿದೆ.
ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮನರೇಗಾ ಯೋಜನೆಯನ್ನು ಹಿಂಪಡೆದು ಹೊಸ ವಿಧೇಯಕ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮಹಾತ್ಮ ಗಾಂಧಿ ಎಂಬ ವಿಶ್ವಮಾನ್ಯ ನಾಯಕನ ಹೆಸರನ್ನು ಯೋಜನೆಯಿಂದ ತೆಗೆದುಹಾಕುವ ಹಿಂದಿನ ಉದ್ದೇಶವೇನು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಹೆಸರು ಬದಲಾವಣೆಯಿಂದ ಅನಗತ್ಯ ವೆಚ್ಚ ಹೆಚ್ಚಾಗುತ್ತದೆ, ಆದರೆ ಅದರಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಈಡೇರುವುದಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಸರ್ಕಾರದ ಪ್ರಕಾರ, ಹೊಸ ಮಸೂದೆ 2047ರ ವಿಕಸಿತ ಭಾರತ ಗುರಿಯನ್ನು ಸಾಧಿಸುವ ಚೌಕಟ್ಟಿನಡಿ ರೂಪಿಸಲಾಗಿದೆ. ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮನರೇಗಾ ಯೋಜನೆ ಕಳೆದ 20 ವರ್ಷಗಳಿಂದ ಗ್ರಾಮೀಣ ಉದ್ಯೋಗ ಕ್ಷೇತ್ರದಲ್ಲಿ ಗೇಮ್ಚೇಂಜರ್ ಆಗಿದೆ ಎಂದು ಸರ್ಕಾರವೂ ಒಪ್ಪಿಕೊಂಡಿದೆ.
ಹೊಸ ಮಸೂದೆಯಲ್ಲಿ ಕಾಮಗಾರಿಗಳನ್ನು ನಾಲ್ಕು ವಿಭಾಗಗಳಡಿ ವಿಂಗಡಿಸಲಾಗಿದೆ: ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ, ವಿಪತ್ತು ನಿರ್ವಹಣೆ, ಸುಗ್ಗಿ ಸಮಯದಲ್ಲಿ ರೈತರು ತಮ್ಮ ಹೊಲಗಳಲ್ಲಿ ನಿರತರಾಗಿರುವುದರಿಂದ ಆ ಅವಧಿಯಲ್ಲಿ ಕೆಲಸ ಒದಗಿಸದಿರಲು ಅವಕಾಶ ನೀಡಲಾಗಿದೆ. ಜೊತೆಗೆ ಪಾರದರ್ಶಕತೆಗಾಗಿ ಬಯೋಮೆಟ್ರಿಕ್ ಹಾಜರಿ ಮತ್ತು ಜಿಯೋಟ್ಯಾಗಿಂಗ್ ವ್ಯವಸ್ಥೆ ಅಳವಡಿಸುವ ಪ್ರಸ್ತಾವವೂ ಇದೆ.
ಈಗಿರುವ ನರೇಗಾ ಯೋಜನೆ –
ವರ್ಷಕ್ಕೆ 100 ದಿನ ಉದ್ಯೋಗ ಖಾತ್ರಿ
ನಿರ್ದಿಷ್ಟ ಉದ್ದೇಶವಿಲ್ಲದೆ ಕೆಲಸ ಹಂಚಿಕೆ
ಕೌಶಲ್ಯರಹಿತ ಉದ್ಯೋಗಗಳಿಗೆ ಮಾತ್ರ ವೆಚ್ಚ
ಕೆಲಸ ಇಲ್ಲದಿದ್ದರೆ ಸ್ಪಷ್ಟ ಮಾಹಿತಿ ಇಲ್ಲ
ವೇತನ ಪಾವತಿಗೆ ನಿಗದಿತ ಕಾಲಾವಧಿ ಇಲ್ಲ
ಗ್ರಾಮ ಪಂಚಾಯತ್ ಮೂಲಕ ಯೋಜನೆ ಜಾರಿ
ಹೊಸ ಪ್ರಸ್ತಾಪಿತ ವಿಧೇಯಕ –
ಉದ್ಯೋಗ ಖಾತ್ರಿ ದಿನಗಳು 125ಕ್ಕೆ ಹೆಚ್ಚಳ
ವಿಕಸಿತ ಭಾರತ ಗುರಿಯೊಂದಿಗೆ ಯೋಜನೆ
ವೆಚ್ಚ ಹಂಚಿಕೆ: ಕೇಂದ್ರ 60%, ರಾಜ್ಯ 40%
ಕೆಲಸ ಆರಂಭವಾಗದಿದ್ದರೆ 60 ದಿನಗಳಲ್ಲಿ ಮಾಹಿತಿ ನೀಡಬೇಕು
ಕೆಲಸ ಮುಗಿದ 15 ದಿನಗಳಲ್ಲಿ ವೇತನ ಪಾವತಿ
ಏಕೀಕೃತ ಮೂಲಸೌಕರ್ಯ ಸಂಸ್ಥೆಯಿಂದ ಜಾರಿ ಮತ್ತು ನಿರ್ವಹಣೆ
ಪ್ರಸ್ತುತ ಮನರೇಗಾ ಯೋಜನೆ ಶೇ.100ರಷ್ಟು ಕೇಂದ್ರ ಸರ್ಕಾರದ ಪ್ರಾಯೋಜಿತವಾಗಿದೆ. ಆದರೆ ಹೊಸ ವಿಧೇಯಕದಡಿ ವೆಚ್ಚವನ್ನು 60:40 ಅನುಪಾತದಲ್ಲಿ ಹಂಚಿಕೊಳ್ಳಬೇಕಾಗಿದೆ. ಅಂದಾಜು ಪ್ರಕಾರ, ಯೋಜನೆಗೆ ವರ್ಷಕ್ಕೆ 1.51 ಲಕ್ಷ ಕೋಟಿ ರೂ. ವೆಚ್ಚ ಆಗಲಿದೆ. ಇದರಲ್ಲಿ ಕೇಂದ್ರ ಸರ್ಕಾರ 95,692 ಕೋಟಿ ರೂ. ಭರಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಮಿತ್ರ ಪಕ್ಷ ಟಿಡಿಪಿಯೂ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಪಯ್ಯಾವುಲ ಕೇಶವ್ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಸಂಪೂರ್ಣ ಅಧ್ಯಯನದ ಬಳಿಕ ಮಸೂದೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್, ಗ್ರಾಮೀಣ ಬಡವರಿಗಾಗಿ ರೂಪಿಸಿದ ಯೋಜನೆಯಿಂದ ಗಾಂಧಿ ಹೆಸರನ್ನು ತೆಗೆದುಹಾಕುವುದು ಅವರ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹೋಟ್, ಗಾಂಧಿ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿ ರಾಷ್ಟ್ರಪಿತರಿಗೆ ಅವಮಾನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಜೈರಾಂ ರಮೇಶ್, ನರೇಗಾ ಸೇರಿದಂತೆ ಅಣುಶಕ್ತಿ ಮತ್ತು ಉನ್ನತ ಶಿಕ್ಷಣ ಆಯೋಗದ ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಿ ಆಳವಾದ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಮನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ಕೈಬಿಡುವ ಕೇಂದ್ರ ಸರ್ಕಾರದ ನಿರ್ಧಾರ ದೇಶವ್ಯಾಪಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಮಸೂದೆ ಸಂಸತ್ತಿನಲ್ಲಿ ಭಾರೀ ಚರ್ಚೆಗೆ ವೇದಿಕೆ ಸೃಷ್ಟಿಸುವ ಸಾಧ್ಯತೆ ಇದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




