Odissa:
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಒಡಿಶಾದ ನದಿಗಳು ಉಕ್ಕಿ ಹರಿಯುತ್ತಿವೆ.ಧಾರಾಕಾರ ಮಳೆಯಿಂದಾಗಿ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಒಂದೆಡೆ ಮನೆ ಬೆಳೆಗಳು ಹಾನಿಯಾದರೆ ನಿರಂತರ ಮಳೆಯಿಂದ ನದಿಗಳು ಮೈತುಂಬಿ ನಿಂತಿವೆ.ತುಂಬಿ ನಿಂತಿರುವ ಒಡಿಶಾದ ಕಲಹಂಡಿ ಜಿಲ್ಲೆಯ ಗೋಲಮುಂಡಾ ಬ್ಲಾಕ್‌ನಲ್ಲಿರುವ ನದಿಯಲ್ಲಿ ಗ್ರಾಮಸ್ಥರು ಶವವನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ದೃಶ್ಯ ಕಂಡುಬಂದಿದೆ.
ಬೆಹೆರಗುಡ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.ಅವರ ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರು ಮಳೆಯಲ್ಲಿ ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು. ಕೊನೆಗೆ ಗ್ರಾಮಸ್ಥರು ಎದೆಯ ಮಟ್ಟಕ್ಕೆ ನಿಂತ ನದಿಯ ನೀರಿನಲ್ಲೇ ಹೆಗಲ ಮೇಲೆ ಅವರ ಶವ ಹೊತ್ತು ಸಾಗಬೇಕಾಗಿ ಬಂತು.
ಅನಾರೋಗ್ಯದಿಂದ ಸಾಂತಾ ರಾಣಾ ಎಂಬ ವ್ಯಕ್ತಿ ಮೃತಪಟ್ಟಿದ್ದು. ಸಂಬಂಧಿಕರು ಅವರ ಮೃತದೇಹವನ್ನು ಎದೆಯ ಎತ್ತರ ನಿಂತಿದ್ದ ನದಿ ನೀರಿನಲ್ಲಿ ಸ್ಮಶಾನದ ಮೈದಾನಕ್ಕೆ ಸಾಗಿಸುವ ದುಸ್ಥಿತಿ ಎದುರಾಗಿತ್ತು. ಸಾಂತಾ ರಾಣಾ ಬಹಳ ದಿನಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದರು ಮಂಗಳವಾರ ಇಹಲೋಕ ತ್ಯಜಿಸಿದ್ದರು. ಜೋರು ಮಳೆಗೆ ಉಕ್ಕಿ ಹರಿಯುತ್ತಿದ್ದ ಹೊಳೆಯ ಇನ್ನೊಂದು ಬದಿಯಲ್ಲಿ ಶವ ಸಂಸ್ಕಾರ ಮಾಡಬೇಕಾಗಿತ್ತು. ಹೀಗಾಗಿ ನದಿ ನೀರಿನಲ್ಲೇ ಶವ ಹೊತ್ತೊಯ್ಯುವ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಯಿತು.
ನದಿಗೆ ಅಡ್ಡಲಾಗಿ ಸೇತುವೆಯಿಲ್ಲದ ಕೊರತೆಯೇ ಗ್ರಾಮಸ್ಥರ ಪರದಾಟಕ್ಕೆ ಕಾರಣವಾಗಿದೆ.ಸೇತುವೆಯ ಕೊರತೆಯಿಂದಾಗಿ ರಾಣಾ ಅವರ ಸಂಬಂಧಿಕರು ಅವರ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನದಿಯನ್ನು ದಾಟಬೇಕಾಗಿ ಬಂತು. ಸುರಿಯುವ ಮಳೆಯಿಂದ ಶವವನ್ನು ರಕ್ಷಿಸಲು ಅದರ ಮೇಲೆ ಬಾಳೆ ಎಲೆಗಳನ್ನು ಹಾಸಲಾಗಿತ್ತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.



