ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಇರುವ ಲಕ್ಕಮ್ಮ ದೇವಿ ದೇವಸ್ಥಾನವು ತನ್ನ ಅಸಾಮಾನ್ಯ ಸಂಪ್ರದಾಯಕ್ಕಾಗಿ ದೇಶದಾದ್ಯಂತ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ ದೇವರಿಗೆ ಹೂ, ಹಣ್ಣು, ತೆಂಗಿನಕಾಯಿ ಅರ್ಪಿಸುವುದು ರೂಢಿ. ಆದರೆ ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ದೇವಿಗೆ ಹೊಸ ಚಪ್ಪಲಿಗಳನ್ನು ಅರ್ಪಿಸುತ್ತಾರೆ. ಹೌದು ನೀವ್ ಕೇಳಿದ್ದು ಸತ್ಯ
ಹಿಂದೊಮ್ಮೆ ಈ ಪ್ರದೇಶದಲ್ಲಿ ಎತ್ತು ಬಲಿ ನೀಡುವ ಪದ್ಧತಿ ಇತ್ತು. ಆದರೆ ಸರ್ಕಾರ ಈ ಆಚರಣೆಯನ್ನು ನಿಷೇಧಿಸಿದ ನಂತರ, ಭಕ್ತರು ದೇವಿಯನ್ನು ಸಮಾಧಾನಪಡಿಸುವ ನೂತನ ವಿಧಾನವಾಗಿ ಚಪ್ಪಲಿ ಅರ್ಪಿಸುವ ಸಂಪ್ರದಾಯ ಆರಂಭಿಸಿದರು. ದಂತಕಥೆಯ ಪ್ರಕಾರ ಒಬ್ಬ ಋಷಿ ತನ್ನ ಬಲಿಯ ಬದಲಿಗೆ ಚಪ್ಪಲಿಯನ್ನು ಅರ್ಪಿಸಿದಾಗ ದೇವಿ ಪ್ರಸನ್ನಳಾದಳು ಅಂತ ಹೇಳಲಾಗಿದೆ…
ಪ್ರತಿ ವರ್ಷ ದೀಪಾವಳಿಯ ಐದು ದಿನಗಳ ನಂತರ ಮತ್ತು ಕಾರ್ತಿಕ ಹುಣ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಹೊಸ ಚಪ್ಪಲಿಗಳನ್ನು ದೇವಸ್ಥಾನದ ಹೊರಗಿನ ಮರಗಳಲ್ಲಿ ನೇತುಹಾಕುತ್ತಾರೆ. ತಮ್ಮ ಆಸೆಗಳು ಈಡೇರಿದ ನಂತರವೂ, ಕೃತಜ್ಞತೆಗಾಗಿ ಮತ್ತೊಂದು ಜೋಡಿ ಚಪ್ಪಲಿಯನ್ನು ಮರಕ್ಕೆ ಕಟ್ಟುತ್ತಾರೆ.
ಲಕ್ಕಮ್ಮ ದೇವಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಭಕ್ತರ ನಂಬಿಕೆಯ ಪ್ರಕಾರ, ಚಪ್ಪಲಿಗಳನ್ನು ಅರ್ಪಿಸಿದರೆ ದುಷ್ಟಶಕ್ತಿಗಳು ದೂರವಾಗುತ್ತವೆ, ಪಾದ–ಮೊಣಕಾಲಿನ ನೋವುಗಳು ಗುಣವಾಗುತ್ತವೆ ಮತ್ತು ಮನದ ಮಾತು ದೇವಿ ಕೇಳುತ್ತಾಳೆಂಬ ವಿಶ್ವಾಸವಿದೆ.
ಇದರ ಮಹಿಮೆ ಕೇಳಿ ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಹಲವಾರು ಭಾಗಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಯಾರಿಗಾದರೂ ಹಾನಿ ಮಾಡುವ ಉದ್ದೇಶದಿಂದ ಪ್ರಾರ್ಥಿಸಿದರೆ ದೇವಿ ಎಂದಿಗೂ ಕ್ಷಮಿಸುವುದಿಲ್ಲ ಎಂಬ ನಂಬಿಕೆ ಇದೆ. ನಂಬಿಕೆ, ಭಕ್ತಿ ಮತ್ತು ಸಂಪ್ರದಾಯಗಳ ಸಂಯೋಜನೆಯೊಂದಿಗೆ ಲಕ್ಕಮ್ಮ ದೇವಾಲಯ ಇಂದು ಅಪರೂಪದ ಸ್ಥಳವಾಗಿ ಎಲ್ಲರ ಗಮನಸೆಳೆಯುತ್ತಿದೆ.
ವರದಿ : ಗಾಯತ್ರಿ ಗುಬ್ಬಿ

