tTechnology News:
ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಎಸ್1 ಪ್ರೊ ಮಾದರಿಯ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ ಎಸ್1 ಮಾದರಿಯ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಹೊಸ ಇವಿ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕಿಂಗ್ ಸ್ವಿಕರಿಸುತ್ತಿದ್ದು, ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್ (https://book.olaelectric.com/) ಮೂಲಕ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದೆ.
ಬುಕಿಂಗ್ ನಂತರ ಮೊದಲ ಹಂತದ ಖರೀದಿ ಪ್ರಕ್ರಿಯೆಗೆ ಸಮ್ಮತಿಸುವ ಗ್ರಾಹಕರಿಗೆ ಸೆಪ್ಟೆಂಬರ್ 7ರಿಂದ ಹೋಂ ಡೆಲಿವರಿ ಆರಂಭವಾಗಲಿದ್ದು, ಫೀಚರ್ಸ್‌ಗಳಲ್ಲಿ ತುಸು ಭಿನ್ನತೆ ಹೊಂದಿರುವ ಎಸ್1 ಇವಿ ಮಾದರಿಯು ಎಸ್1 ಪ್ರೊ ಮಾದರಿಯನ್ನೇ ಆಧರಿಸಿ ನಿರ್ಮಾಣವಾಗಿದೆ.
ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರು ಪೂರ್ಣ ಮೊತ್ತದೊಂದಿಗೆ ಇಲ್ಲವೆ ಓಲಾ ಕಂಪನಿಯೊಂದಿನ ಪಾಲುದಾರಿಕೆ ಬ್ಯಾಂಕ್‌ಗಳಿಂದಲೂ ಸುಲಭ ಹಣಕಾಸು ಸೌಲಭ್ಯಗಳೊಂದಿಗೆ ಖರೀದಿ ಮಾಡಬಹುದಾಗಿದ್ದು, ಇವೆರಡ ಜೊತೆಗೆ ಕಂಪನಿಯು ತನ್ನದೇ ಆದ ಓಲಾ ಫೈನಾನ್ಸ್ ಮೂಲಕ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.
ಇನ್ನು ಹೊಸ ಎಸ್1 ಮಾದರಿಯು ಕಳೆದ ವರ್ಷ ಅನಾವರಣಗೊಳಿಸಿದ ಸಂದರ್ಭದಲ್ಲಿನ ಮಾದರಿಗಿಂತಲೂ ಇದೀಗ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ವಿನ್ಯಾಸದ ವಿಷಯದಲ್ಲಿ ಮಾತ್ರ ಎಸ್1 ಪ್ರೊ ಮಾದರಿಯನ್ನೇ ಹೋಲುತ್ತದೆ.
ಎಸ್1 ಪ್ರೊ ಮಾದರಿಗಾಗಿ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದು, ಸ್ಕೂಟರ್ ವಿತರಣೆಯ ಹೆಚ್ಚಳದ ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ನಿರಂತರವಾಗಿ ಹೊಸ ಬದಲಾವಣೆಗಳನ್ನು ಕೂಡಾ ಪರಿಚಯಿಸುತ್ತಿದೆ.