ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿರುವ ಕನ್ನಡಿಗ ಮಂಜುನಾಥ್, ಭರತ್ ಭೂಷಣ್ ಹಾಗೂ ಕಾನ್ಪುರದ ನವ ಜೋಡಿ ಶುಭಂ ದ್ವಿವೇದಿಯವರ ನೋವಿನ ಕಥೆಗಳು ಭಾರತೀಯರಲ್ಲಿ ಕಣ್ಣೀರು ತರಿಸುತ್ತಿದೆ. ಆದರೆ ಇದೇ ತೆರನಾಗಿ ಕೆಲಸಕ್ಕೆ ಹೋಗಿದ್ದ ಮಗ ಮನೆಗೆ ಬಾರದೆ ಹೆಣವಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕುದುರೆ ಸವಾರಿ ಮಾಡಿಕೊಂಡು 28 ವರ್ಷದ ಸೈಯದ್ ಆದಿಲ್ ಹುಸೈನ್ ಶಾ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹಲವಾರು ವರ್ಷಗಳಿಂದಲೂ ಪಹಲ್ಗಾಮ್‌ಗೆ ಬರುವ ಪ್ರವಾಸಿಗರಿಗೆ ಕುದುರೆ ಸವಾರಿಯ ಸೇವೆ ನೀಡುತ್ತಿದ್ದರು. ಬೈಸರ್ ವ್ಯಾಲಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಅವರನ್ನು ಸುರಕ್ಷಿತವಾಗಿ ಮರಳಿ ಅವರವರ ಹೋಟೆಲ್‌ಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದರು. ಏಪ್ರಿಲ್ 22ರಂದೂ ಸಹ ಎಂದಿನಂತೆ ತಮ್ಮ ಕೆಲಸಕ್ಕೆ ಸೈಯದ್ ಹುಸೈನ್ ಆದಿಲ್ ಶಾ ತೆರಳಿದ್ದರು.
ರಕ್ತ ಪಿಪಾಸುಗಳ ವಿರುದ್ಧ ಸೆಣಸಿದ್ದ ಆದಿಲ್..
ಬೈಸರ್ ವ್ಯಾಲಿಯ ಕಡೆಗೆ ಹೊರಟಿದ್ದ ಇವರಿಗೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಅಲ್ಲದೆ ತಕ್ಷಣವೇ ಅಲರ್ಟ್ ಆಗಿದ್ದ ಅವರು ಪ್ರವಾಸಿಗರನ್ನು ರಕ್ಷಿಸಲು ತಕ್ಷಣ ಎಚ್ಚರಿಕೆ ನೀಡುತ್ತಾರೆ. ಅಷ್ಟರಲ್ಲಿಯೇ ಇವರ ಬಳಿ ಬಂದ ಉಗ್ರ ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಮುಂದಾಗುತ್ತಾನೆ. ಆಗ ಧೈರ್ಯದಿಂದ ಮುನ್ನುಗ್ಗಿ ಅವನ ಕೈಯಿಂದ ಗನ್ ಕಿತ್ತುಕೊಳ್ಳಲು ಹೋರಾಡಿದ್ದಾರೆ. ಹಲವು ಬಾರಿ ಉಗ್ರನೊಂದಿಗೆ ಕಾದಾಡಿದ್ದ ಸೈಯದ್ ಹುಸೈನ್ ಆದಿಲ್ ಶಾ ಕೊನೆಗೆ ಆ ರಣಹೇಡಿಯ ಗುಂಡಿಗೆ ಬಲಿಯಾಗಿದ್ದಾರೆ. ವಯಸ್ಸಾದ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಆದಿಲ್ ಒಬ್ಬರೇ ಆಧಾರವಾಗಿದ್ದರು. ಆದೆ ಇದೀಗ ಆ ಕುಟುಂಬ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.
ಇನ್ನೂ ಮಗನ ಕಳೆದುಕೊಂಡು ದುಖಃದಲ್ಲಿರುವ ಆದಿಲ್ ಅವರ ತಂದೆ ಸೈಯದ್ ಹೈದರ್ ಶಾ ಕಣ್ಣೀರಾಗಿದ್ದಾರೆ. ನನ್ನ ಮಗ ಕೆಲಸಕ್ಕೆ ಪಹಲ್ಗಾಮ್‌ಗೆ ಹೋಗಿದ್ದ, ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿಯ ಬಗ್ಗೆ ನಮಗೆ ತಿಳಿಯಿತು. ನಾವು ನಮ್ಮ ಮಗನಿಗೆ ಕರೆ ಮಾಡಿದೆವು, ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಜೆ 4.40 ಕ್ಕೆ, ಅವನ ಫೋನ್ ಆನ್ ಆಯಿತು, ಆದರೆ ಯಾರೂ ಉತ್ತರಿಸಲಿಲ್ಲ. ಬಳಿಕ ನಾವು ಪೊಲೀಸ್ ಠಾಣೆಗೆ ಹೋಗಿದ್ದ ವೇಳೆ ದಾಳಿಯಲ್ಲಿ ಅವನು ಗಾಯಗೊಂಡಿದ್ದಾನೆ ಎಂದು ನಮಗೆ ಗೊತ್ತಾಗಿತ್ತು. ಆದರೆ ಈಗ ಅವನಿಲ್ಲ ಎನ್ನುವುದು ನಮಗೆ ಆಕಾಶವೇ ಕಳಚಿಬಿದ್ದಂತಾಗಿದೆ ಎಂದು ದುಖಃ ತೋಡಿಕೊಂಡಿದ್ದಾರೆ. ಈ ಪೈಶಾಚಿಕ ಕೃತ್ಯಕ್ಕೆ ಕಾರಣರಾದವರನ್ನು ಸುಮ್ಮನ್ನೇ ಬಿಡಬಾರದು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಮಗೆ ಅವನೇ ಆಧಾರವಾಗಿದ್ದ..
ಮಂಗಳವಾರ ಸಂಜೆ 3 ಗಂಟೆಯ ವೇಳೆ ನನ್ನ ಮಗ ಕೆಲಸಕ್ಕೆ ತೆರಳಿದ್ದ. ನಾವು ಅವನಿಗೆ ಕರೆ ಮಾಡಿದ್ದು, ಅವನ ಪೋನ್ ಸ್ವಿಚ್ ಆಫ್ ಆಗಿತ್ತು. 4.40 ರ ವೇಳೆ ಆತನ ಫೋನ್ ರಿಂಗ್ ಆಗಿತ್ತು ಆದರೆ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಆತ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಯಿತು. ನಮಗೆ ಇದ್ದ ಏಕೈಕ ಆಧಾರವೇ ಅವನಾಗಿದ್ದನು. ಕುದುರೆ ಸವಾರಿ ಮಾಡಿ ದಿನಕ್ಕೆ ಬರುತ್ತಿದ್ದ 300 ರಿಂದ 400 ರೂಪಾಯಿ ದುಡಿಮೆಯಲ್ಲಿ ನಮ್ಮ ಕುಟುಂಬ ಸಾಕುತ್ತಿದ್ದನು. ಈಗ ನಮಗೆ ಸಹಾಯ ಮಾಡಲು ಬೇರೆ ಯಾರೂ ಇಲ್ಲ ಎಂದು ಮೃತ ಸೈಯದ್ ಆದಿಲ್ ಶಾ ತಾಯಿ ಬೇಬಿ ಜಾನ್ ಮಾಧ್ಯಮಗಳೆದುರು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಅಲ್ಲದೆ ಅದಿಲ್ ಪತ್ನಿಯನ್ನು ಉಲ್ಲೇಖಿಸಿ ಅವಳು ಗಂಡನ ಬರುವಿಕೆಗಾಗಿ ಕಾದಿದ್ದಳು, ಆದರೆ ಈಗ ಆತನ ಶವವನ್ನು ನೋಡುವ ಸ್ಥಿತಿ ಬಂದಿದೆ ಎಂದು ಆದಿಲ್ ಸಹೋದರಿ ಅಣ್ಣನ ಸಾವಿಗೆ ಆಘಾತಕ್ಕೊಳಗಾಗಿದ್ದಾರೆ.
ಆದಿಲ್ ಧೈರ್ಯ ಮೆಚ್ಚಬೇಕು..!
ಇನ್ನೂ ಮೃತ ಅದಿಲ್ ಅಂತ್ಯಕ್ರಿಯೆಯಲ್ಲಿ ಖುದ್ದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಅಲ್ಲದೆ ಇಲ್ಲಿಗೆ ಬಂದಿದ್ದ ಅತಿಥಿಗಳನ್ನು ನಾವು ಶವದ ಪೆಟ್ಟಿಗೆಯಲ್ಲಿ ಕಳುಹಿಸುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಹಾಗೆಯೇ ಈ ಆದಿಲ್ ತನ್ನ ಕುಟುಂಬ ನಿರ್ವಹಣೆಗಾಗಿ ದಿನಾಲೂ ದುಡಿಮೆ ಮಾಡುತ್ತಿದ್ದರು. ಕೆಲಸಕ್ಕೆ ಹೋಗಿದ್ದ ಅವರನ್ನು ಪೆಟ್ಟಿಗೆಯಲ್ಲಿ ಮನೆಗೆ ತಂದಿರುವುದು ನನಗೆ ತೀವ್ರ ದುಖಃವಾಗಿದೆ. ಆದರೆ ಈ ಯುವಕನ ಧೈರ್ಯವನ್ನು ನಾವು ಮೆಚ್ಚಬೇಕು, ಉಗ್ರರ ವಿರುದ್ಧ ಆತನ ಸಾಹನ ನಿಜಕ್ಕೂ ನಮಗೆ ಗರ್ವವೆನಿಸುತ್ತದೆ. ಉಗ್ರರ ಕೈಯಲ್ಲಿನ ಗನ್ ಕಿತ್ತುಕೊಳ್ಳಲು ಆತ ಮಾಡಿರುವ ಸಾಹಸವನ್ನು ನಾವು ಗೌರವಿಸಬೇಕು ಎಂದು ಒಮರ್ ಅಬ್ದುಲ್ಲಾ ಆದಿಲ್ ಕುರಿತು ಭಾವಕಾರಾಗಿದ್ದಾರೆ.
ಒಟ್ನಲ್ಲಿ.. ಪ್ರವಾಸಕ್ಕೆಂದು ತೆರಳಿ ಸೋಮವಾರ ಪ್ರಕೃತಿ ಸೌಂದರ್ಯ ಸವಿದಿದ್ದವರು ಮರು ದಿನದ ಆರಂಭ ಅತ್ಯಂತ ಸಂತಸದಿಂದ ಕೂಡಿರುತ್ತದೆ ಅಂತ ಭಾವಿಸಿದ್ದರು. ಅಲ್ಲದೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲಿದ್ದ ಕಾರಣ ದುಡಿಮೆಯೂ ಚೆನ್ನಾಗಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ಶಾ ಇದ್ದಿದ್ದರೇನೋ.. ಆ ದಿನ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಎಲ್ಲ ಪ್ರವಾಸಿಗರೂ ಸಂತಸದಲ್ಲಿದ್ದರು, ಆದರೆ ಬಳಿಕ ಕೇಳಿದ್ದ ಗುಂಡಿನ ಶಬ್ಧ ಕ್ಷಣಾರ್ಧದಲ್ಲಿಯೇ ಅವರ ಖುಷಿಯನ್ನು ಕಿತ್ತುಕೊಂಡಿತ್ತು. ಮನಸ್ಸು ಗಾಬರಿಯಾಗಿತ್ತು, ಶಸ್ತ್ರಧಾರಿ ರಣಹೇಡಿ ಉಗ್ರರು ಪ್ರವಾಸಿಗರ ಹೆಸರು, ಧರ್ಮ ಕೇಳಿ ಕೇಳಿ ಗುಂಡಿಟ್ಟಿದ್ದರು ಒಂದರ ಮೇಲೊಂದರಂತೆ ಗುಂಡಿನ ದಾಳಿ ನಡೆಸಲಾಗಿತ್ತು. ಆಗ ಪ್ರವಾಸಿಗರ ಜೊತೆಗಿದ್ದ ಈ ಕಾಶ್ಮೀರಿ ಮುಸ್ಲಿಂ ಆದಿಲ್ ಮಾನವೀಯತೆಯ ನೆಲೆಯಲ್ಲಿ ಪ್ರವಾಸಿಗರನ್ನು ರಕ್ಷಿಸಲು ಮುಂದಾದಾಗ ನಿರ್ದಯಿ ರಕ್ತಪಿಪಾಸುಗಳು ಅವನ ಉಸಿರು ನಿಲ್ಲಿಸುವ ಮೂಲಕ ಅತನ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿರುವುದು ನಿಜಕ್ಕೂ ಈ ಉಗ್ರರ ವಿರುದ್ಧ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುವಂತೆ ಮಾಡಿದೆ.