www.karnatakatv.net: ರಾಯಚೂರು: ದೇಶಾದ್ಯಂತ ಕಾಡ್ತಿರೋ ಕೊರೋನಾ ಹಾವಳಿ ಒಂದೆಡೆಯಾದ್ರೆ, ಸದ್ಯ ಈರುಳ್ಳಿಗೂ ಒಂದು ರೋಗ ಬಾಧಿಸ್ತಾ ಇದೆ. ಇದ್ದಕ್ಕಿದ್ದಂತೆ ಆಕಾಶಕ್ಕೇರಿ, ಮತ್ತೊಮ್ಮೆ ಪಾತಳಕ್ಕಿಳಿಯೋ ಈರುಳ್ಳಿಗೆ ಸದ್ಯ ಶಿಲೀಂಧ್ರ ರೋಗ ಕಾಣಿಸಿಕೊಳ್ತಿದೆ. ಇದು ಈರುಳ್ಳಿ ಬೆಳೆದ ರೈತರಲ್ಲಿ ಕಳವಳ ಮೂಡಿಸಿದೆ.
ಕೊರೋನಾ ಲಾಕ್ ಡೌನ್ ನಿಂದಾಗಿ ತೀರಾ ಸಂಕಷ್ಟ ಅನುಭವಿಸಿದ್ದ ರೈತರು ಇನ್ನೇನು ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಹೊಸ ತಲೆನೋವು ಶುರುವಾಗಿದೆ. ಜಮೀನಿನಲ್ಲಿ ಬೆಳೆದ ಈರುಳ್ಳಿಗೆ ಫಂಗಸ್ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯ ದೇವದುರ್ಗ, ಸಿರಿವಾರ, ಲಿಂಗಸೂಗೂರು ತಾಲೂಕುಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯೋ ರೈತರು ಈ ಫಂಗಲ್ ರೋಗದಿಂದ ಹೈರಾಣಾಗಿದ್ದಾರೆ. ಈ ಬಾರಿಯಾದ್ರೂ ಲಾಭ ಗಳಿಸಬಹುದೆಂಬ ನಿರೀಕ್ಷೆಯಿಟ್ಟುಕೊಂಡು ಕೊಯ್ಲಿಗಾಗಿ ಕಾಯ್ತಿದ್ದ ಅನ್ನದಾತರಿಗೆ ಮತ್ತೊಮ್ಮೆ ನಷ್ಟದ ಭೀತಿ ಎದುರಾಗಿದೆ.
ಜಿಲ್ಲೆಯಾದ್ಯಂತ ಬೆಳೆದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿಗೆ ಈ ರೋಗ ಆವರಿಸಿಕೊಳ್ತಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ರೈತರ ಪರಿಸ್ಥಿತಿ. ಇನ್ನು ಈರುಳ್ಳಿಗೆ ಔಷಧ ಸಿಂಪಡಿಸಿದ್ರೂ ಕೂಡ ಯಾವುದೇ ಪ್ರಯೋಜನ ವಾಗದೆ ರೈತರು ಅಸಹಾಯಕರಾಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಇನ್ನು ಈರುಳ್ಳಿಗೆ ಆವರಿಸಿಕೊಂಡಿರೋ ಈ ರೋಗಕ್ಕೆ ಕೋಲಿಕೋಡ್ರಾಕಂ ಅನ್ನೋ ಫಂಗಸ್ ಕಾರಣವಾಗಿದೆ. ಈ ಫಂಗಸ್ ಆವರಿಸಿಕೊಂಡರೆ ಈರುಳ್ಳಿ ಕಪ್ಪಾಗಿ ಕ್ರಮೇಣ ಕೊಳೆತುಹೋಗುತ್ತೆ. ಅತಿಯಾದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಈ ರೋಗ ಕಾಣಿಸಿಕೊಳ್ಳುತ್ತೆ ಅಂತ ಹೇಳಲಾಗ್ತಿದೆ.
ಇನ್ನು ಸಾಲಸೋಲ ಮಾಡಿ ಈರುಳ್ಳಿಯ ಫಸಲು ತೆಗೆಯಲು ಹೊರಟಿದ್ದ ರೈತರ ಕನಸಿಗೆ ಸದ್ಯ ಈ ಫಂಗಸ್ ತಣ್ಣೀರೆರಚಿದೆ.
ರೈತರ ಜಮೀನುಗಳಿಗೆ ತೋಟಗಾರಿಕೆ ಅಧಿಕಾರಿಗಳು, ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸಿ ಅಂತ ಅನ್ನದಾತರ ಮನವಿ ಮಾಡಿದ್ದಾರೆ
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು