ಬಸ್ಸಲ್ಲಿ ಲಗೇಜ್ ಬಿಟ್ಟು ಬೇರೆ ವಸ್ತು ಸಾಗಾಟ ನಿಷಿದ್ದ ಅಂತ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಕರ್ನೂಲು ಬಸ್ ದುರಂತದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿಯೂ ಬಸ್ಸುಗಳಲ್ಲಿ ಪ್ರಯಾಣಿಕರ ವೈಯಕ್ತಿಕ ಲಗೇಜ್ ಹೊರತುಪಡಿಸಿ ಬೇರೆ ವಸ್ತುಗಳನ್ನು ಸಾಗಿಸಲು ಕಟ್ಟುನಿಟ್ಟಿನ ನಿಷೇಧ ಜಾರಿಗೊಳಿಸಲಾಗಿದೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಖಾಸಗಿ ಬಸ್ಸಿನಲ್ಲಿ ಹೆಚ್ಚಿನ ಲಗೇಜ್ ಇದ್ದ ವಿಚಾರಕ್ಕೂ ಈಗ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.2013ರಲ್ಲಿ ನಾನೇ ಸಾರಿಗೆ ಸಚಿವರಾಗಿದ್ದಾಗ ಹಾವೇರಿಯಲ್ಲಿ ಇದೇ ರೀತಿಯ ಭೀಕರ ಅಪಘಾತ ಸಂಭವಿಸಿತ್ತು.
ಆಗ ಎಮರ್ಜೆನ್ಸಿ ಎಕ್ಸಿಟ್ ವ್ಯವಸ್ಥೆ ಇರಲಿಲ್ಲ. ಇದೀಗ ಸಾರಿಗೆ ಇಲಾಖೆಯ ಅಡಿಯಲ್ಲಿ ಇರುವ ಎಲ್ಲಾ 25,000ಕ್ಕೂ ಅಧಿಕ ಬಸ್ಸುಗಳು ಸೇರಿದಂತೆ ಖಾಸಗಿ ಹಾಗೂ ಶಾಲಾ ಬಸ್ಸುಗಳಲ್ಲಿಯೂ ಎಮರ್ಜೆನ್ಸಿ ಎಕ್ಸಿಟ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ವೇಳೆ ಶಕ್ತಿ ಯೋಜನೆ ಯಾವುದೇ ರೂಪದಲ್ಲೂ ಬಂದ್ ಆಗುವುದಿಲ್ಲ, ಮಹಿಳೆಯರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ ಎಂದೂ ಅವರು ಹೇಳಿದರು. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದರು.




