www.karnatakatv.net : ತುಮಕೂರು: ಕಾನೂನು ರೀತಿ ನಿಯಮಗಳಿಗಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಅರಿತು ಜೀವನವನ್ನ ಮಾಡಬೇಕು ಎಂದು ಶಿರಾದ ಡಿವೈಎಸ್ ಪಿ ಕುಮಾರಸ್ವಾಮಿ ತಿಳಿಸಿದರು
ಗುಬ್ಬಿ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಮುಜರಾಯಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸುವ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿರಾ ಡಿವೈಎಸ್ಪಿ ಕುಮಾರಸ್ವಾಮಿ ದೇವರು ಮತ್ತು ಭಕ್ತಾದಿಗಳ ನಡುವೆ ಸೇತುವೆಯಂತೆ ಕೆಲಸ ಮಾಡುವಂತಹ ಅರ್ಚಕರು ಜಾತಿ ಧರ್ಮ ಮತಗಳ ಆಚಾರವನ್ನು ಬಿಟ್ಟು ಎಲ್ಲರೂ ಕೂಡ ಒಂದೇ ಎಂದು ಭಾವಿಸಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ಇಡೀ ಸಮಾಜವೇ ಶಾಂತಿ ಸೌಹಾರ್ದದಿಂದ ಕೂಡಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಆರತಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಸಾರುವಂತಹ ಕೆಲಸ ನಡೆಯಬೇಕಾಗಿದೆ. ಯಾರಿಗೂ ಸಹ ನೋವು ಉಂಟು ಮಾಡುವಂತಹ ಕೆಲಸವನ್ನು ಯಾರೂ ಮಾಡಬಾರದು. ದೇವರು ಎಲ್ಲರಿಗೂ ಸಹ ಒಂದೇ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ನಿರೀಕ್ಷ ಕ.ನದಾಫ್, ಚೇಳೂರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆಯ ಹನುಮಂತರಾಜು, ಅರ್ಚಕರ ಸಂಘದ ಅಧ್ಯಕ್ಷರುಗಳಾದ ಮಹಾ ರುದ್ರೇಶ್ ಹಾಗೂ ನರಸಿಂಹರಾಜು ಸೇರಿದಂತೆ ತಾಲ್ಲೂಕಿನ ಎಲ್ಲಾ ಅರ್ಚಕರುಗಳು ಹಾಜರಿದ್ದರು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು