ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು, ಹಣದ ಆಮಿಷ ನೀಡಲಾಗ್ತಿದೆ ಅನ್ನೋ ಆರೋಪ ಸಂಚಲನ ಸೃಷ್ಟಿಸಿದೆ. ಯೂಟ್ಯೂಬ್‌ನಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದ ಆರೋಪದಡಿ, ಯೂಟ್ಯೂಬರ್ ಅಭಿಷೇಕ್‌ನನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಬೆನ್ನಲ್ಲೇ ಮಂಡ್ಯದ ಯೂಟ್ಯೂಬರ್ ಸುಮಂತ್ ಎಂಬಾತ ಎಂಟ್ರಿ ಕೊಟ್ಟಿದ್ದಾನೆ.
ಮಾಧ್ಯಮವೊಂದರ ಜೊತೆ ಸುಮಂತ್ ಮಾತನಾಡಿದ್ದು, ನನಗೂ ಹಣದ ಆಮಿಷವೊಡ್ಡಿದ್ದರು ಅಂತಾ ಬಾಂಬ್ ಹಾಕಿದ್ದಾನೆ. ಗೋಲ್ಡನ್ ಕನ್ನಡಿಗ ಹೆಸರಿನಲ್ಲಿ ಸುಮಂತ್ ಯೂಟ್ಯೂಬ್ ಚಾನಲ್ ಇತ್ತು. 5 ತಿಂಗಳ ಹಿಂದೆ ಬಟ್ಟೆ ಅಂಗಡಿಯಲ್ಲಿ ಅಭಿ ಸಿಕ್ಕಿದ್ದ. ಆ ವೇಳೆ ಸಮೀರ್ ವಿಡಿಯೋಗಳ ಬಗ್ಗೆ ಮಾತುಕತೆ ನಡೆದಿದೆ. ಸಮೀರ್ ವಿಡಿಯೋ ಹಿಂದೆ, 300ರಿಂದ 400 ಟ್ರೋಲ್ ಪೇಜ್, 50ರಿಂದ 60 ಮಂದಿ ಕಂಟೆಂಟ್ ಕ್ರಿಯೇಟರ್ಸ್ ಕೆಲಸ ಮಾಡಿದ್ದಾರೆ. ಇವರಿಗೆಲ್ಲಾ ಫಂಡ್ ಆಗಿದೆ. ನಮ್ಮ ಬಾಸ್ ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಅಂತಾ ಅಭಿ ಹೇಳಿದ್ನಂತೆ.
ಇದೇ ವೇಳೆ ತನಗೂ ಓಪನ್ ಆಫರ್ ನೀಡಿದ್ದಾಗಿ ಸುಮಂತ್ ಹೇಳಿದ್ದಾನೆ. ನೀನೂ ಬಾ. ಹಣಕಾಸು, ಸಾರಿಗೆ, ಉಳಿದುಕೊಳ್ಳುವ ವ್ಯವಸ್ಥೆ ಮಾಡಿಸಿಕೊಡ್ತೀನಿ. ನಾನೂ ಕೂಡ ಧರ್ಮಸ್ಥಳದಲ್ಲೇ ಇನ್ವೆಸ್ಟಿಗೇಷನ್ ಮಾಡ್ತಿದ್ದೀನಿ ಅಂತಾ, ಅಭಿ ಹೇಳಿದ್ನಂತೆ. ನನಗೆ ಬಂದಿರುವ ಪ್ರಶ್ನೆಗಳನ್ನು ಕೇಳ್ತಿದ್ದೆ. ಆತನಿಗೆ ಉತ್ತರ ಕೊಡೋದಕ್ಕೆ ಆಗ್ಲಿಲ್ಲ. ಹೀಗಂತ ಯೂಟ್ಯೂಬರ್ ಸುಮಂತ್ ಸ್ಪೋಟಕ ಆರೋಪ ಮಾಡಿದ್ದಾರೆ.