ಸೌರಭ್ ಕುಲಕರ್ಣಿ ನಿರ್ದೇಶನದ ‘ಎಸ್.ಎಲ್.ವಿ’ ಈ ವಾರ ಬಿಡುಗಡೆ
‘ಪಾ.ಪ. ಪಾಂಡು’ ಧಾರಾವಾಹಿಯಲ್ಲಿ ಶ್ರೀಹರಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವರು ಸೌರಭ್ ಕುಲಕರ್ಣಿ. ಖ್ಯಾತ ನಿರೂಪಕ ದಿವಂಗತ ಸಂಜೀವ್ ಕುಲಕರ್ಣಿ ಅವರ ಮಗನಾದ ಸೌರಭ್ ಈ ಹಿಂದೆ ಒಂದಿಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದು, ಈಗ ಇದೇ ಮೊದಲ ಬಾರಿಗೆ ‘ಎಸ್.ಎಲ್.ವಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಇದೇ ಶುಕ್ರವಾರ ರಾಜ್ಯದ್ಯಂತ ತೆರೆಗೆ ಬರುತ್ತಿದೆ.
ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ ಎಂದು ‘ಎಸ್.ಎಲ್.ವಿ’ ಕುರಿತು ಹೇಳುತ್ತಾರೆ ಸೌರಭ್ ಕುಲಕರ್ಣಿ. ”ಎಸ್.ಎಲ್.ವಿ’ ಎಂದರೆ ‘ಸಿರಿ ಲಂಬೋದರ ವಿವಾಹ’ ಎಂದರ್ಥ. ಹಾಗೆಂದಾಕ್ಷಣ, ಅದು ನಾಯಕ-ನಾಯಕಿಯ ಹೆಸರು ಅಂದನಿಸಬಹುದು. ಇಲ್ಲಿ ಸಿರಿ, ಲಂಬೋದರ ಎಂಬುದು ನಾಯಕ-ನಾಯಕಿಯ ಹೆಸರಲ್ಲ. ಇಬ್ಬರು ರಾಜಕಾರಣಿಗಳ ಮಕ್ಕಳು. ವೆಡ್ಡಿಂಗ್ ಪ್ಲಾನರ್ಗಳಾಗಿರುವ ನಾಯಕ-ನಾಯಕಿ, ಸಿರಿ ಮತ್ತು ಲಂಬೋದರರ ಮದುವೆ ಮಾಡಿಸುವುದಕ್ಕೆ ಮುಂದಾಗುತ್ತಾರೆ.
ಈ ಜರ್ನಿಯಲ್ಲಿ ನಡೆಯುವ ಒಂದಿಷ್ಟು ರೋಚಕ, ಹಾಸ್ಯಮಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಹೈಲೈಟ್’ ಎನ್ನುತ್ತಾರೆ ಸೌರಭ್.
‘ಎಸ್.ಎಲ್.ವಿ’ ಚಿತ್ರವನ್ನು ಸೌರಭ್ ಮತ್ತು ತಂಡ ಈಗಾಗಲೇ ದುಬೈ, ಅಬುಧಾಬಿ, ಮಸ್ಕತ್ ಮತ್ತು ಸೊಹಾರ್ನಲ್ಲಿ ಪ್ರದರ್ಶಿಸಿ ಬಂದಿದ್ದಾರೆ. ಅಲ್ಲಿ ಚಿತ್ರದ ಬಗ್ಗೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವಂತೆ. ‘ಮೊದಲು ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಸಣ್ಣ ಮಕ್ಕಳಿಂದ ಹಿರಿಯರವರೆಗೆ ಎಲ್ಲ ವಯಸ್ಸಿನವರೂ ಸಿನಿಮಾ ನೋಡಿ ಮೆಚ್ಚಿಕೊಂಡರು. ಅದನ್ನು ನೋಡಿದ ಮೇಲೆ ಭಯ ಕಡಿಮೆ ಆಯ್ತು. ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಇದರಲ್ಲಿ ಕಾಮಿಡಿ, ಸಸ್ಪೆನ್ಸ್, ಹಾಡು, ಡ್ಯಾನ್ಸ್ ಎಲ್ಲವೂ ಇದೆ. ಚಿತ್ರ ನೋಡಿದವರೆಲ್ಲ ಇದೊಂದು ಪೈಸಾ ವಸೂಲ್ ಚಿತ್ರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲೂ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.
‘ಎಸ್.ಎಲ್.ವಿ’ ಚಿತ್ರದಲ್ಲಿ ಅಂಜನ್ ಭಾರದ್ವಾಜ್, ದಿಶಾ ರಮೇಶ್, ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ. ಸತೀಶ್ಚಂದ್ರ, ಶಿವು, ಸುಷ್ಮಿತಾ ಮುಂತಾದವರು ನಟಿಸಿದ್ದಾರೆ. ಖ್ಯಾತ ನಿರ್ಮಾಪಕ ಜಾಕ್ ಮಂಜು ಅರ್ಪಿಸುವುದರ ಜೊತೆಗೆ ತಮ್ಮ ಶಾಲಿನಿ ಆರ್ಟ್ಸ್ ಮೂಲಕ ಬಿಡುಗಡೆ ಮಾಡುತ್ತಿರುವ ಈ ಚಿತ್ರವನ್ನು ವರ್ಸಾಟೋ ವೆಂಚರ್ಸ್, ಪವಮಾನ ಕ್ರಿಯೇಷನ್ಸ್, ಫೋರೆಸ್ ನೆಟ್ವರ್ಕ್ ಸಲ್ಯೂಷನ್ಸ್ ಮತ್ತು ದುಪದ ದೃಶ್ಯ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಚಿತ್ರಕ್ಕೆ ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ ಮತ್ತು ಸಂಘರ್ಷ್ ಕುಮಾರ್ ಸಂಗೀತವಿದೆ