ಬೆಂಗಳೂರು: ದೈಹಿಕ ಇತಿಮಿತಿಗಳನ್ನು ಹೊಂದಿದ್ದರೂ ಅದನ್ನು ಮೀರಿ, ಬ್ಯಾಡ್ಮಿಂಟನ್, ಈಜು ಮತ್ತು ಅಥ್ಲೆಟಿಕ್ಸ್ ಗಳಲ್ಲಿ ನೂರಾರು ಕ್ರೀಡಾ ಪಟುಗಳನ್ನು ರೂಪಿಸಿರುವ ಪದ್ಮಶ್ರೀ ಪುರಸ್ಕೃತ ಕೆ.ವೈ.ವೆಂಕಟೇಶ್ ಅವರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಬಣ್ಣಿಸಿದ್ದಾರೆ.
ಮಲ್ಲೇಶ್ವರಂನ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಶುಕ್ರವಾರ ಮಾತನಾಡಿದರು.
ವೆಂಕಟೇಶ್ ಅವರು ಪ್ಯಾರಾಲಿಂಪಿಕ್ ಮತ್ತು ಪ್ಯಾರಾ ಏಷ್ಯನ್ ಕ್ರೀಡಾಕೂಟಗಳಿಗೆ ನೂರಾರು ಕ್ರೀಡಾಪಟುಗಳನ್ನು ರೂಪಿಸಿದ್ದಾರೆ. ಮಲ್ಲೇಶ್ವರಂ ಕ್ಷೇತ್ರವು ಕ್ರೀಡಾ ಸಂಸ್ಕೃತಿಯ ತಾಣವಾಗಿ ಗಮನ ಸೆಳೆದಿರುವುದರಲ್ಲಿ ವೆಂಕಟೇಶ್ ಅವರ ಪಾತ್ರ ಅಮೂಲ್ಯವಾಗಿದೆ ಎಂದು ಅವರು ಮೆಚ್ಚುಗೆ ಸೂಸಿದರು.
ಸಾಧಕರು ಯಾವತ್ತೂ ವೈಯಕ್ತಿಕ ಲಾಭದ ಅಪೇಕ್ಷೆ ಇಟ್ಟುಕೊಳ್ಳಲು ಹೋಗುವುದಿಲ್ಲ. ವೆಂಕಟೇಶ್ ಕೂಡ ಇದೇ ಪಂಕ್ತಿಗೆ ಸೇರಿದ್ದಾರೆ ಎಂದು ಅವರು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ದಿಲೀಪ್, ಮಂಜುನಾಥ್ ರಾಜು, ಹನುಮೇಶ್ ಮುಂತಾದವರು ಉಪಸ್ಥಿತರಿದ್ದರು.