ಪಾಕಿಸ್ತಾನದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ಪರಿಣಾಮವಾಗಿ ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆಗಳು ಮುಂದುವರಿಯಲಿವೆ. ಕೆಲ ಕಡೆಗಳಲ್ಲಿ ಗುಡುಗು-ಸಿಡಿಲು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಪಾಕಿಸ್ತಾನದಲ್ಲಿನ ಈ ವಾಯುಭಾರ ಕುಸಿತ ಮುಂದಿನ 12 ಗಂಟೆಗಳಲ್ಲಿ ದುರ್ಬಲಗೊಂಡು ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ. ಈ ಸ್ಥಿತಿಯು ಅರೇಬಿಯನ್ ಸಮುದ್ರದ ದಿಕ್ಕಿಗೆ ಚಲಿಸಿ, ಕರ್ನಾಟಕದ ವಾತಾವರಣ ವ್ಯವಸ್ಥೆಗಳನ್ನು ಪರೋಕ್ಷವಾಗಿ ಪರಿಣಾಮಿಸುವ ಸಾಧ್ಯತೆ ಇದೆ.
ಸೆಪ್ಟೆಂಬರ್ 10 ದಕ್ಷಿಣ ಒಳನಾಡು ಚಾಮರಾಜನಗರ, ಮಂಡ್ಯ, ಮೈಸೂರಿನಲ್ಲಿ ಮತ್ತೆ ಭಾರೀ ಮಳೆಯ ಸಾಧ್ಯತೆ. ಬೀದರ್, ಯಾದಗಿರಿ, ಕಲಬುರ್ಗಿಯಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗಲಿದೆ. ಸೆಪ್ಟೆಂಬರ್ 11–13 ರಂದು ವಿಜಯಪುರ, ರಾಯಚೂರನಲ್ಲಿ ಗುಡುಗು ಸಹಿತ ಮಳೆಯಾಗಲಿದೆ.ಬೆಂಗಳೂರು, ಕೋಲಾರ, ಚಿತ್ರದುರ್ಗದಲ್ಲಿ ಸಾಧಾರಣ ಮಳೆಯಾಗಲಿದೆ.
ಸೆಪ್ಟೆಂಬರ್ 14–15 ರಂದು ಬಾಗಲಕೋಟೆ, ಕಲಬುರ್ಗಿಕಲಬುರಗಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಏಳು ದಿನ ಹಗುರ ಮಳೆಯ ಸಾಧ್ಯತೆ ಇದೆ. ರೈತರು ಮತ್ತು ಸಾರ್ವಜನಿಕರು ಮಳೆಯ ಮುನ್ಸೂಚನೆಗೆ ಅನುಗುಣವಾಗಿ ತಕ್ಷಣದ ಚಟುವಟಿಕೆಗಳಿಗೆ ತಿದ್ದುಪಡಿ ತರಬೇಕು. ಬಿರುಗಾಳಿ, ಸಿಡಿಲು ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆ ಸಲಹೆ ನೀಡಿದೆ.
ವರದಿ : ಲಾವಣ್ಯ ಅನಿಗೋಳ