Thursday, May 8, 2025

Latest Posts

ಪಾಕ್‌ ಪೂರ್ತಿ ಫಿನಿಶ್‌ ಮಾಡಿ : “ಆಪರೇಷನ್‌ ಸಿಂಧೂರ್‌”ಗೆ ಓವೈಸಿ ಫುಲ್‌ ಖುಷ್..!‌

- Advertisement -

ಆಪರೇಷನ್‌ ಸಿಂಧೂರ ವಿಶೇಷ..

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಪ್ರತೀಕಾರ ತೀರಿಸಿಕೊಂಡಿದೆ. ತಡರಾತ್ರಿ ಪಾಕಿಸ್ತಾನದ ಒಳಗೆ ನುಗ್ಗಿ ಹೆಮ್ಮೆಯ ಭಾರತೀಯ ಸೇನೆ ಉಗ್ರರನ್ನು ಬಗ್ಗು ಬಡಿಯುವ ಮೂಲಕ ಪಾಕ್‌ ಬುಡಕ್ಕೆ ಬೆಂಕಿ ಇಡುವ ಕೆಲಸ ಮಾಡಿದೆ.

ಆಪರೇಷನ್‌ ಸಿಂಧೂರಕ್ಕೆ ಅಸಾದುದ್ದೀನ್‌ ಖಷ್..!

ಇನ್ನೂ ಪಹಲ್ಗಾಮ್‌ ದಾಳಿಯ ಬಳಿಕ ನಿರಂತರವಾಗಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಅವರು ಆಪರೇಷನ್‌ ಸಿಂಧೂರ್‌ಗೆ ಫುಲ್‌ ಖಷ್‌ ಆಗಿದ್ದಾರೆ. ಭಾರತೀಯ ಸೇನೆ ಭಯೋತ್ಪಾದಕರ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿದ ಬಳಿಕ ಓವೈಸಿ, ಪಾಕಿಸ್ತಾನವನ್ನು ಹಾಗೆ ಬಿಡಬಾರದಿತ್ತು, ಅದನ್ನು ಸಂಪೂರ್ಣ ನಾಶ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಬುಧವಾರ ಬೆಳಗಿನ ಜಾವ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರವನ್ನು ಓವೈಸಿ ಸ್ವಾಗತಿಸಿದ್ದಾರೆ. ಮತ್ತೊಂದು ಪಹಲ್ಗಾಮ್ ಘಟನೆ ಮುಂದೆ ಯಾವತ್ತೂ ಸಂಭವಿಸದಂತೆ ಪಾಕಿಸ್ತಾನದ ಬುಡಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕರೆ ನೀಡಿದ್ದಾರೆ.

ಜೈ ಹಿಂದ್ ಎಂದ ಓವೈಸಿ..

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದೆ. ನಮ್ಮ ರಕ್ಷಣಾ ಪಡೆಗಳು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ಸರ್ಜಿಕಲ್ ದಾಳಿಗಳನ್ನು ನಾನು ಸ್ವಾಗತಿಸುತ್ತೇನೆ. ಮತ್ತೊಂದು ಪಹಲ್ಗಾಮ್ ಮತ್ತೆಂದೂ ಸಂಭವಿಸದಂತೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕಿದೆ. ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಜೈ ಹಿಂದ್, ಎಂದು ಓವೈಸಿ ಉರ್ದು ಮತ್ತು ಹಿಂದಿಯಲ್ಲಿ ಪೋಸ್ಟ್‌ ಮಾಡುವ ಮೂಲಕ ಓವೈಸಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಉಗ್ರ ನೆಲೆಗಳು ಉಡೀಸ್..!

‌ಇನ್ನೂ ಕಳೆದ ಏಪ್ರಿಲ್ 22 ರಂದು, ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಜನ ಪ್ರವಾಸಿಗರು ಮತ್ತು ಸ್ಥಳೀಯ ಕುದುರೆ ಸವಾರಿ ಆಪರೇಟರ್ ಒಬ್ಬರನ್ನು ಕೊಂದಿದ್ದರು. ಇದಕ್ಕೆ ಕ್ಷಿಪ್ರ ಪ್ರತಿಕ್ರಿಯೆಯಾಗಿ, ಭಾರತೀಯ ಪಡೆಗಳು ಇಂದು ಮುಂಜಾನೆ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ 21 ಉಗ್ರ ನೆಲೆಗಳನ್ನು ಧ್ವಂಸ ಮಾಡಿವೆ.

ಕಾರ್ಯಾಚರಣೆ ಮೇಲೆ ಮೋದಿ ನಿಗಾ..

ಪ್ರಮುಖವಾಗಿ ಈ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಧಾನಿ ಮೋದಿ ಅವರು ವಾರ್‌ ರೂಂನಿಂದ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದರು. ಕಾರ್ಯಾಚರಣೆಯ ಯಶಸ್ವಿಯ ನಂತರ, ಈ ದಾಳಿಯು ಭಯೋತ್ಪಾದಕ ಅಡಗುತಾಣಗಳಿಗೆ ಮಾತ್ರ ಸೀಮಿತವಾಗಿದೆ, ಪಾಕಿಸ್ತಾನದ ಯಾವುದೇ ಮಿಲಿಟರಿ ಆಸ್ತಿಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ರಕ್ಷಣಾ ಸಚಿವಾಲಯವು ಈ ಕ್ರಮವು ಕೇಂದ್ರೀಕೃತ, ಅಳತೆ ಮಾಡಲಾದ ಮತ್ತು ಉಲ್ಬಣಗೊಳ್ಳದ ಕ್ರಮವಾಗಿದೆ ಎಂದು ಒತ್ತಿಹೇಳಿದೆ, ಪಾಕಿಸ್ತಾನಿ ಸೇನೆಯನ್ನು ಇದರಲ್ಲಿ ಸೇರಿಸಿಲ್ಲ, ಕೇವಲ ಉಗ್ರರನ್ನಷ್ಟೇ ಟಾರ್ಗೆಟ್‌ ಮಾಡಿ ಭಾರತೀಯ ಸೇನೆ ತಕ್ಕ ಪ್ರತೀಕಾರ ತೀರಿಸಿಕೊಂಡಿದೆ.

ಬದಲಾದ ಓವೈಸಿ…

ಇನ್ನೂ ಪ್ರಮುಖವಾಗಿ ಈ ಓವೈಸಿ ವಿಚಾರದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸುವುದಾದರೆ, ಈ ಮೊದಲಿನಿಂದಲೂ ಭಾರತದ ವಿರೋಧಿ ನಿಲುವುಗಳಿಂದಲೇ ಸುದ್ದಿಯಾಗುತ್ತಿದ್ದರು. ದೇಶ ವಿರೋಧಿ, ಹಿಂದೂ ವಿರೋಧಿ ಹೇಳಿಕೆಗಳಿಂದ ಹಲವು ಬಾರಿ ವಿವಾದಕ್ಕೆ ಕಾರಣವಾಗಿದ್ದವರು. ಆದರೆ ಪಹಲ್ಗಾಮ್‌ ದಾಳಿಯ ಬಳಿಕ ದೇಶ ಪ್ರೇಮವನ್ನು ಮೆರೆಯುತ್ತಿದ್ದಾರೆ. ಅಲ್ಲದೆ ತಮ್ಮದೇ ಆದ ಕಟುವಾದ ಪದಗಳಲ್ಲಿ ಪಾಕಿಸ್ತಾನದ ವಿರುದ್ಧ ಬೆಂಕಿಯುಗುಳುತ್ತಿದ್ದರು. ಪಾಕ್‌ನ ರಾಜಕೀಯ ನಾಯಕರನ್ನು ಸೇರಿದಂತೆ ಅಲ್ಲಿನ ಆಂತರಿಕ ಪರಿಸ್ಥಿತಿಯ ಬಗ್ಗೆ ಓವೈಸಿ ಲೇವಡಿ ಮಾಡುತ್ತಲೇ ಬಂದಿದ್ದಾರೆ. ಕಳೆದ 12 ದಿನಗಳಿಂದಲೂ ಪಾಕಿಸ್ತಾನದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಕಾಂಗ್ರೆಸ್ ಹೀಗ್ಯಾಕೆ ಮಾಡಿತು..?

ಅಲ್ಲದೆ ಓವೈಸಿ ದೇಶ ಭಕ್ತರಾಗಿ ಬದಲಾದರೆ, ಇತ್ತ ದೇಶದಲ್ಲಿ 70 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಮಾತ್ರ ಬದಲಾಗುವ ಹಾಗೆ ಕಾಣುತ್ತಿಲ್ಲ. ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪ್ರತೀಕಾರದ ದಾಳಿ ನಡೆಸಿದ್ದು, ದೇಶದ ಎಲ್ಲೆಡೆ ನಮ್ಮ ಸೈನಿಕರಿಗೆ ಅಭಿನಂದನೆಗಳ ಮಹಾಸಾಗರವೇ ಹರಿದು ಬರುತ್ತಿದೆ. ಈ ನಡುವೆ ಕರ್ನಾಟಕ ಕಾಂಗ್ರೆಸ್‌ ಮಹಾತ್ಮ ಗಾಂಧೀಜಿ ಅವರ ಸಂದೇಶವನ್ನು ಹಂಚಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ರಾಜ್ಯ ಕಾಂಗ್ರೆಸ್​ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಟ್ವೀಟ್​ ಮಾಡುವ ಮೂಲಕ ಶಾಂತಿ ಮಂತ್ರ ಜಪಿಸಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ, ಇದಾದ ಕೆಲವೇ ಕ್ಷಣದಲ್ಲಿ ಕೆಲ ಕಾಂಗ್ರೆಸ್ಸಿಗರು ಸೇರಿದಂತೆ ಸಾರ್ವಜನಿಕರು ತೀವ್ರ ಕಿಡಿಕಾರಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್​ ಆ ಟ್ವೀಟ್​​ನ್ನು ಡಿಲೀಟ್​ ಮಾಡಿದೆ. ಬಳಿಕ ಭಾರತೀಯ ಸೇನೆಯನ್ನು ಹೊಗಳುವ ಮೂಲಕ ಮತ್ತೊಂದು ಹೊಸ ಟ್ವೀಟ್ ಮಾಡಿರುವುದು ಕಂಡು ಬಂದಿದೆ. ನಾವು ಕೇಂದ್ರ ಸರ್ಕಾರ ಮತ್ತು ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆʼ ಎಂದು ಮತ್ತೊಂದು ಪೋಸ್ಟ್‌ ಅನ್ನು ಕಾಂಗ್ರೆಸ್‌ ಹಂಚಿಕೊಂಡಿದೆ. ಪಹಲ್ಗಾಮ್‌ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿರುವ ಆಪರೇಷನ್‌ ಸಿಂಧೂರ್‌ಗೆ ಇಡೀ ದೇಶವೇ ಸಂಭ್ರಮದಲ್ಲಿರುವಾಗ ಕಾಂಗ್ರೆಸ್‌ ಹೀಗ್ಯಾಕೆ ಮಾಡಿತು ಎಂಬ ಚರ್ಚೆಗಳು ಜೋರಾಗಿವೆ. ಆದರೆ ಏನೇ ಆಗಲಿ ನಮ್ಮ ಸೇನೆಯ ಮೇಲೆ ನಮಗೆ ಹೆಮ್ಮೆ ಇರಬೇಕು, ಅದರಲ್ಲೂ ದೇಶದ ಭದ್ರತೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಇನ್ನಾದರೂ ಕಾಂಗ್ರೆಸ್‌ ತಿಳಿಯಬೇಕಿದೆ.

- Advertisement -

Latest Posts

Don't Miss