ವಿಶ್ವಪ್ರಸಿದ್ಧ ಮೈಸೂರು ಅರಮನೆಯ ನಿರ್ವಹಣೆಯಲ್ಲಿ ನಡೆಯುತ್ತಿರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಅರಮನೆಯ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾದ ವರಹ ಗೇಟ್‌ನ ಮೇಲ್ಛಾವಣಿ ದಿಢೀರ್ ಕುಸಿದು, ಅಲ್ಲಿ ಓಡಾಡುತ್ತಿದ್ದ ಪ್ರವಾಸಿಗರ ಗೈರಿಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯ ಸಮಯದಲ್ಲಿ ಗೇಟ್ ಕೆಳಗೆ ನಿಲ್ಲಿಸಲಾಗಿದ್ದ ಅರಮನೆ ಸಿಬ್ಬಂದಿಯೊಬ್ಬರ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಟ್ಟಡಗಳ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಮತ್ತೆ ಎದ್ದಿವೆ.
ವರಹ ಗೇಟ್ ಪ್ರವಾಸಿಗರು ಹಾಗೂ ಸಾರ್ವಜನಿಕರು ಹೆಚ್ಚಾಗಿ ಬಳಸುವ ಪ್ರಮುಖ ದ್ವಾರಗಳಲ್ಲಿ ಒಂದಾಗಿದೆ. ಭಾಗ್ಯವಶಾತ್, ಘಟನೆಯ ಸಂದರ್ಭದಲ್ಲಿ ಪ್ರವಾಸಿಗರ ಸಂಚಾರ ಇರದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ. ಕುಸಿದ ಮಣ್ಣು ಮತ್ತು ಕಲ್ಲುಗಳು ನೇರವಾಗಿ ಬೈಕ್ ಮೇಲೆ ಬಿದ್ದು ಭಾರೀ ಹಾನಿ ಉಂಟುಮಾಡಿವೆ. ಘಟನೆ ನಡೆದ ತಕ್ಷಣ ಅರಮನೆ ಆಡಳಿತ ಮಂಡಳಿ ಸ್ಥಳಕ್ಕೆ ಧಾವಿಸಿ, ಮುಂಜಾಗ್ರತಾ ಕ್ರಮವಾಗಿ ಗೇಟ್ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೆ, ಸ್ವಚ್ಛತಾ ಸಿಬ್ಬಂದಿ ಕುಸಿದು ಬಿದ್ದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ.
ಇದೇ ಮೊದಲ ಬಾರಿ ಮೈಸೂರು ಅರಮನೆ ನಿರ್ವಹಣೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿಲ್ಲ. ಕೆಲವೇ ದಿನಗಳ ಹಿಂದೆ ಅರಮನೆಯ ಮುಖ್ಯ ದರ್ಬಾರ್ ಹಾಲ್‌ನಲ್ಲಿ ಮೇಲ್ಛಾವಣಿ ಸೋರಿಕೆಯಿಂದ ನೀರು ಒಳನುಗ್ಗುತ್ತಿರುವುದನ್ನು ಏಷ್ಯಾನೆಟ್ ಸುುವರ್ಣ ನ್ಯೂಸ್ ವರದಿ ಮಾಡಿತ್ತು. ಆದರೆ ಶಾಶ್ವತ ದುರಸ್ತಿ ಮಾಡುವ ಬದಲು, ಅರಮನೆ ಆಡಳಿತ ಟಾರ್ಪಲ್ ಹೊದೆದು ತಾತ್ಕಾಲಿಕ ಪರಿಹಾರಕ್ಕೆ ಮಾತ್ರ ಮೊರೆ ಹೋಗಿತ್ತು.
ಸುದ್ದಿ ಪ್ರಸಾರವಾದ ನಂತರವೂ ಶಾಶ್ವತ ದುರಸ್ತಿ ಕೈಗೊಳ್ಳದೆ, ಇದೇ ರೀತಿಯ ತಾತ್ಕಾಲಿಕ ಕ್ರಮ ಮುಂದುವರಿಸಿರುವ ಆಡಳಿತ ಮಂಡಳಿಯ ನಿರ್ಲಕ್ಷ್ಯವು ಈಗ ವರಹ ದ್ವಾರದ ಮೇಲ್ಛಾವಣಿ ಕುಸಿತದ ಮೂಲಕ ಮತ್ತೆ ಬಯಲಾಗಿದೆ. ಹೊಯ್ಸಳ ಹಾಗೂ ಇಂಡೋ-ಸಾರ್ಸೆನಿಕ್ ವಾಸ್ತುಶೈಲಿಗಳ ಸಮ್ಮಿಲನದ ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ಅರಮನೆ, ವಿಶ್ವ ಪರಂಪರೆ ಪಟ್ಟಿಗೆ ಸೇರಲು ಯೋಗ್ಯವೆಂದು ತಜ್ಞರು ತಿಳಿಸುತ್ತಾರೆ. ಇಂತಹ ಐತಿಹಾಸಿಕ ಕಟ್ಟಡದ ನಿರ್ವಹಣೆಯಲ್ಲಿನ ಈ ನಿರ್ಲಕ್ಷ್ಯ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶಾಶ್ವತ, ಸಮಗ್ರ ಮತ್ತು ವೈಜ್ಞಾನಿಕ ನಿರ್ವಹಣೆಗೆ ತಕ್ಷಣ ಮುಂದಾಗಬೇಕು, ತಾತ್ಕಾಲಿಕ ರಿಪೇರಿಗಳ ಮೂಲಕ ಸಮಸ್ಯೆ ಮುಚ್ಚಿಹಾಕಬಾರದು ಎಂದು ಪ್ರವಾಸಿಗರು, ಇತಿಹಾಸಕಾರರು ಹಾಗೂ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




