ಉಡುಪಿ: ಕಾರ್ಕಳ ತಾಲೂಕಿನ ಬೈಲೂರಿನ ಉಮ್ಮಿಕ್ಕಳ ಬೆಟ್ಟದಲ್ಲಿರೋ ಪರಶುರಾಮ ಥೀಮ್ ಪಾರ್ಕ್ ಯೋಜನೆ ಸಾಕಾರಕ್ಕೆ ತಡೆಯೊಡ್ಡುವ ವಿಗ್ರಹ ವಿರೋಧಿಗಳ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ.. ಥೀಮ್ ಪಾರ್ಕ್ನ ಪರಶುರಾಮ ವಿಗ್ರಹ ಮಾಡಿದ ಶಿಲ್ಪಿ ಕೃಷ್ಣ ನಾಯ್ಕ್ ವಿರುದ್ಧ ಸ್ಥಳೀಯರಾದ ಕೃಷ್ಣ ಶೆಟ್ಟಿ ಅನ್ನೋರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರೋ ಹೈಕೋರ್ಟ್ ಮತ್ತೊಂದು ನಿರ್ದೇಶನ ನೀಡೋ ಮೂಲಕ ವಿಗ್ರಹ ವಿರೋಧಿಗಳ ಎಲ್ಲಾ ಪ್ರಯತ್ನಗಳಿಗೂ ತಣ್ಣೀರೆರಚಿದೆ.
ಶಿಲ್ಪಿ ಕೃಷ್ಣ ನಾಯ್ಕ್ ವಿರುದ್ಧ ಸ್ಥಳೀಯರಾದ ಕೃಷ್ಣ ಶೆಟ್ಟಿ ಎಂಬುವರು ಕಾರ್ಕಳ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸರು ಬೆಂಗಳೂರಿನ ಕಚೇರಿಯಲ್ಲಿ ಇಡಲಾಗಿದ್ದ ಪರಶುರಾಮ ವಿಗ್ರಹದ ಬಿಡಿಭಾಗಗಳನ್ನ ವಶಕ್ಕೆ ಪಡೆದಿದ್ರು.. ಈ ಮಧ್ಯೆ, ಇದೀಗ ತನಿಖೆ ನಡೆಯುತ್ತಿರೋ ಸಂದರ್ಭದಲ್ಲಿ ಶಿಲ್ಪಿ ಕೃಷ್ಣ ನಾಯ್ಕ್ ಅವರ ವಿಚಾರಣೆ ನಡೆಸಬಾರದು ಅಂತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರು ಇಂದು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.. ಈ ಮೂಲಕ ಥೀಮ್ ಪಾರ್ಕ್ ವಿರೋಧಿಗಳಿಗೆ ಮತ್ತೊಮ್ಮೆ ಕಾನೂನು ಹೋರಾಟದಲ್ಲಿ ದೊಡ್ಡ ಹಿನ್ನಡೆಯಾಗಿದೆ.
ಇನ್ನು, ಕಳೆ ೮ ತಿಂಗಳ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಥೀಮ್ ಪಾರ್ಕ ಗೋಮಾಳ ಜಮೀನಿನಲ್ಲಿದೆ ಅಂತ ಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ವಜಾಗೊಳಿಸಿತ್ತು.. ಅರ್ಜಿದಾರರು ಸಾಕಷ್ಟು ವಿಳಂಬವಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ.. ಅಲ್ಲದೆ ಈ ಎಲ್ಲಾ ಅಂಶಗಳು ಊಹೆಯಂತಿದೆ.. ಸ್ವಂತ ಅಭಿಪ್ರಾಯದ ಮೂಟೆಯಂತಿದೆ ಅಂತ ಹೈಕೋರ್ಟ್ ವಿಭಾಗೀಯ ಪೀಠ ಪಿಐಎಲ್ ಅರ್ಜಿಯನ್ನ ಸಾರಾಸಗಟಾಗಿ ತಳ್ಳಿ ಹಾಕಿ ಛೀಮಾರಿ ಹಾಕಿತ್ತು. ಗೋವುಗಳನ್ನು ಸಾಕದವರು ಗೋಮಾಳ ರಕ್ಷಣೆ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವೇ ಇಲ್ಲ ಅಂತ ಅರ್ಜಿದಾರರನ್ನು ಹೈಕೋರ್ಟ್ ಪ್ರಶ್ನಿಸಿತ್ತು..
2024ರ ಏಪ್ರಿಲ್ ಮೊದಲ ವಾರದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಶಿಲ್ಪಿ ಕೃಷ್ಣ ನಾಯ್ಕ್ ಕಾಮಗಾರಿಯನ್ನು ಮುಂದುವರೆಸಲು ಅನುಮತಿಯನ್ನು ನೀಡುವಂತೆ ಮನವಿ ಮಾಡಿದ್ರು. ವಿಚಾರಣೆ ನಡೆಸಿದ್ದ ಕೋರ್ಟ್ ಕಾಮಗಾರಿಯನ್ನು ಮುಂದುವರೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನೂ ಸಹ ನೀಡಿತ್ತು. ಅಲ್ಲದೆ, 2 ತಿಂಗಳೊಳಗೆ ಕಾಮಗಾರಿಯನ್ನು ಮುಗಿಸುವಂತೆ ಡಿಸಿಗೆ ನ್ಯಾಯಾಲಯ ಗಡುವು ನೀಡಿತ್ತು. ಆದ್ರೆ, ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ನೆಪವೊಡ್ಡಿ ಜಿಲ್ಲಾಧಿಕಾರಿಗಳು ಕಾಮಗಾರಿಗೆ ಅನುಮತಿ ನೀಡಿರಲಿಲ್ಲ.. ಪರಶುರಾಮ ವಿಗ್ರಹ ಸ್ಥಾಪನೆಯಾಗಲೇ ಬಾರದೆಂಬ ಪಟ್ಟ ಭದ್ರ ಹಿತಾಶಕ್ತಿಗಳ ಎಲ್ಲ ರೀತಿಯ ಪ್ರಯತ್ನಕ್ಕೆ ಸತತ ಸೋಲಾಗುತಿದ್ದು, ನ್ಯಾಯಾಲಯದ ಮೂಲಕ ತಡೆಯೊಡ್ಡುವ ಪ್ರಯತ್ನಗಳು ಫಲಿಸುತಿಲ್ಲ.ಸದುದ್ದೇಶದ ಯೋಜನೆ ಕಾರ್ಯಗತಗೊಳ್ಳಲು ಸರಕಾರ, ಜಿಲ್ಲಾಡಳಿತ ಅನುಮೋದನೆಗೊಂಡ ಬಾಕಿ ಮೊತ್ತ ಬಿಡುಗಡೆಗೊಳಿಸಿ ಬೆಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸೋದ್ಯಮಕ್ಕೆ ಬೆಟ್ಟವನ್ನು ಆದಷ್ಟೂ ಬೇಗ ಮುಕ್ತಗೊಳಿಸಬೇಕು. ಪ್ರವಾಸೋದ್ಯಮವಾಗಿ ಕಾರ್ಕಳ ಅಭಿವೃದ್ದಿ ಸಹಿಸದೆ ನಡೆಸುತ್ತಿರುವ ರಾಜಕೀಯ ಕೆಸರೆರೆಚಾಟಗಳನ್ನು ನಿಲ್ಲಿಸಬೇಕು.