VIDEO: ಮೋದಿ ಕೈ ಕುಲುಕಿದ ರಾಹುಲ್

ಲೋಕಸಭೆಯ ಅಧಿವೇಶನದ 3ನೇ ದಿನವಾದ ಇಂದು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು. ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಅವರು ಧ್ವನಿಮತದ ಮೂಲಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಸತತ ಎರಡನೇ ಅವಧಿಗೆ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಸಂಖ್ಯಾಬಲದ ಕೊರತೆ ಇದ್ದರೂ, ಬಿಜೆಪಿಯ ಮನೋಬಲವನ್ನು ಕುಗ್ಗಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟವು ಕಾಂಗ್ರೆಸ್‌ನ 8 ಬಾರಿಯ ಸಂಸದ ಕೆ ಸುರೇಶ್ ಅವರನ್ನು ಸ್ಪೀಕರ್ ಹುದ್ದೆಗೆ ಕಣಕ್ಕಿಳಿಸಿತ್ತು. ಈ ಮೂಲಕ ಎನ್‌ಡಿಎ ಮಿತ್ರ ಪಕ್ಷಗಳಲ್ಲಿನ ಒಗ್ಗಟ್ಟನ್ನು ಪರೀಕ್ಷೆಗೆ ಒಳಪಡಿಸಿತ್ತು.
ಮೋದಿ- ರಾಹುಲ್‌ ಪರಸ್ಪರ ಹಸ್ತಾಲಾಘವ
ಓ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾದ ನಂತರ ಪ್ರಧಾನಿ ಮೋದಿ ಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪರಸ್ಪರ ಹಸ್ತಾಲಾಘವ ಮಾಡಿದ ಅಪರೂಪದ ಕ್ಷಣಗಳಿಗೆ ಇಡೀ ಸದನ ಸಾಕ್ಷಿಯಾಯ್ತು.
ಸ್ಪೀಕರ್‌ ಆಗಿ ಓಂ ಬಿರ್ಲಾ ಅವರು ಆಯ್ಕೆಯಾಗುತ್ತಿದ್ದಂತೆ ಮೋದಿ ಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದ್ರು. ಈ ವೇಳೆ ಮೋದಿ ಹಾಗೂ ರಾಹುಲ್ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಸಭಾಧ್ಯಕ್ಷ ಸ್ಥಾನದವರೆಗೆ ಕರೆದೊಯ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಓಂ ಬಿರ್ಲಾ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅನುಮೋದಿಸಿದರು. ಬಳಿಕ ಎನ್‌ಡಿಎ ಮೈತ್ರಿಕೂಟದ ಹಲವು ಸದಸ್ಯರು ಓಂ ಬಿರ್ಲಾ ಅವರ ಹೆಸರನ್ನು ಅನುಮೋದಿಸಿದರು. ವಿರೋಧ ಪಕ್ಷದ ಸದಸ್ಯರು ಕೋಡಿಕುನ್ನಿಲ್ ಸುರೇಶ್ ಅವರ ಹೆಸರನ್ನು ಪ್ರಸ್ತಾಪಿಸಿ, ಅನುಮೋದಿಸಿದರು. ಪೀಠದಲ್ಲಿ ಕುಳಿತಿದ್ದ ಹಂಗಾಮಿ ಸ್ಪೀಕರ್‌ ಭರ್ತೃಹರಿ ಮೆಹತಾಬ್ ಅವರು ಪ್ರಸ್ತಾವವನ್ನು ಮತಕ್ಕೆ ಹಾಕಿದರು. ಧ್ವನಿ ಮತ ಮೂಲಕ ಪ್ರಸ್ತಾವನೆಗೆ ಅನುಮೋದನೆ ಲಭಿಸಿತು. ಓಂ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಘೋಷಿಸಿದ್ರು. ಪ್ರಧಾನಿ ಮೋದಿ, ಸಚಿವ ಕಿರಣ್ ರಿಜಿಜು ಹಾಗೂ ರಾಹುಲ್ ಗಾಂಧಿ ಅವರು ನೂತನ ಸ್ಪೀಕರ್‌ ಅವರನ್ನು ಪೀಠಕ್ಕೆ ಕರೆತಂದರು.
ರಾಜಸ್ಥಾನದ ಕೋಟಾದಿಂದ ಮೂರು ಬಾರಿ ಸಂಸದರಾಗಿರುವ ಓಂ ಬಿರ್ಲಾ ಅವರ ಗೆಲುವನ್ನು ಎನ್‌ಡಿಎ ಮಿತ್ರ ಪಕ್ಷಗಳು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದವು. ಮೋದಿ, ರಾಹುಲ್ ಗಾಂಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬಿರ್ಲಾ ಅವರನ್ನು ಸ್ಪೀಕರ್ ಕುರ್ಚಿಯವರೆಗೂ ಜತೆಗೆ ಕರೆದೊಯ್ದರು.
ಒಟ್ನಲ್ಲಿ ಲೋಕಸಭಾ ಚುನಾವಣೆ ವೇಳೆ ಪರಸ್ಪರ ವಾಗ್ದಾಳಿ ನಡೆಸಿದ್ದ ಇಬ್ಬರೂ ನಾಯಕರು, ಸಂಸತ್​ನಲ್ಲಿ ಕೈಕುಲುಕಿದ್ದಾರೆ.

About The Author