ಇಡೀ ರಾಜ್ಯವೇ ಬೆಚ್ಚಿ ಬೀಳಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡ ಅವರು ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ. ಶುಕ್ರವಾರ ಹೈಕೋರ್ಟ್ ನ ನ್ಯಾಯಾಧೀಶರಾದ ವಿಶ್ವಜಿತ್ ಶೆಟಿ ಅವರ ಪೀಠ ಮುಂದೆ ಅರ್ಜಿ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ಈಗಾಗಲೇ ಈ ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಮೊದಲೇ ನೀವು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದೀರಿ. ಹೀಗಾಗಿ ನೀವು ಹಿಂದಕ್ಕೆ ಪಡೆದು ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದರು.
ನ್ಯಾಯಾಧೀಶರ ಸೂಚನೆಯಂತೆ, ಪವಿತ್ರಾಗೌಡ ಅವರ ಪರ ವಕೀಲರಾದ ಟಾಮಿ ಸೆಬಾಸ್ಟಿಯನ್ ಅವರು ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ.ರೇಣುಕಾಸ್ವಾಮಿ ಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ಪ್ರಕರಣದಲ್ಲಿ ನಟ ದರ್ಶನ್ ಅವರು ಎ 2 ಆರೋಪಿಯಾಗಿದ್ದಾರೆ. ಉಳಿದಂತೆ ಈ ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳು ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರು ಅಲ್ಲಿ ಚೇರ್ ಮೇಲೆ ಕುಳಿತು ಟೀ ಕಪ್ ಹಿಡಿದು, ಕೈಯಲ್ಲಿ ಸಿಗರೇಟ್ ಹಿಡಿದಿದ್ದ ಫೋಟೋವೊಂದು ಲೀಕ್ ಆಗಿ ವೈರಲ್ ಆಗಿತ್ತು. ಅದಾದ ಬಳಿಕ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಅಷ್ಟೇ ಅಲ್ಲ, ಬೆಳಗಾವಿಯ ಹಿಂಡಲಗ ಜೈಲು ಹಾಗು ಶಿವಮೊಗ್ಗ ಜೈಲಿಗೂ ಕೆಲ ಆರೋಪಿಗಳನ್ನು ಶಿಫ್ಟ್ ಮಾಡಲಾಗಿದೆ.
ಈ ಮಧ್ಯೆ ದರ್ಶನ್ ಅವರು ಬಳ್ಳಾರಿ ಜೈಲು ಸೆಟ್ ಆಗುತ್ತಿಲ್ಲ. ಹಾಗಾಗಿ ಬೇರೆಡೆ ಶಿಫ್ಟ್ ಮಾಡಿ ಎಂದು ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಈ ಹಿದೆ ಮೂರು ಬೇಡಿಕೆ ಇಟ್ಟಿದ್ದರು. ಮೊದಲನೆಯದು ಸರ್ಜಿಕಲ್ ಚೇರ್ ಕೇಳಿದ್ದರು. ಅದನ್ನು ಪೊಲೀಸರು ಕೊಟ್ಟಿದ್ದರು. ಎರಡನೆಯದು ಅವರು ಫೋನ್‌ಗಾಗಿ ಮನವಿ ಮಾಡಿದ್ದರು. ಅದನ್ನೂ ವ್ಯವಸ್ಥೆಗೊಳಿಸಿದ್ದರು. ಇನ್ನು ಅವರು ಟಿವಿಗಾಗಿಯೂ ಮನವಿ ಮಾಡಿದ್ದು, ಅದನ್ನು ನೀಡಿದ್ದರು. ಆದರೆ, ಅದು ಸರಿಯಾಗಿಲ್ಲ. ಬೇರೆ ಟಿವಿ ಕೊಡಬೇಕು ಎಂದು ಮನವಿ ಮಾಡಿದ್ದರು.
ಅದೇನೆ ಇರಲಿ, ಪೊಲೀಸರು 3991 ಪುಟಗಳಿರುವ ದೋಷಾರೋಪ ಪಟ್ಟಿ ಸಲ್ಲಿಸಿದ್ದಾಗಿದೆ. ದರ್ಶನ್ ಕೈಗೂ ಆ ಚಾರ್ಜ್ ಶೀಟ್ ಸಿಕ್ಕಿದೆ. ಇನ್ನು, ಜಾಮೀನು ಅರ್ಜಿಯನ್ನು ದರ್ಶನ್ ಯಾವಾಗ ಸಲ್ಲಿಸುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ.