ಧರ್ಮಸ್ಥಳ ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಧರ್ಮಸ್ಥಳದ ಘನತೆಯನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. NIA ತನಿಖೆಗೆ ಒತ್ತಾಯಿಸುತ್ತಿರುವುದರ ಮಧ್ಯೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
ಜನಪ್ರಿಯ ನಾಯಕ ಪವನ್ ಕಲ್ಯಾಣ್ ಅವರು ಇದೇ ಸೆಪ್ಟೆಂಬರ್ 11ರಂದು ಸಂಜೆ 5 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ, ಮುಂಭಾಗದಲ್ಲಿ ಆರತಿ ಸೇವೆ ಸಲ್ಲಿಸಲಿದ್ದಾರೆ. ಅಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ.
ಟಿಡಿಪಿ ಮತ್ತು ಬಿಜೆಪಿಯ ಮೈತ್ರಿ ಸರ್ಕಾರದ ಭಾಗವಾಗಿರುವ ಪವನ್ ಕಲ್ಯಾಣ್ ಹಿಂದೂಪರ ನಿಲುವಿಗೆ ಹೆಸರುವಾಸಿಯಾಗಿದ್ದಾರೆ. ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು ಪತ್ತೆಯಾದ ಸಂದರ್ಭದಲ್ಲೂ ಅವರು ತಿರುಪತಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಅದೇ ವೇಳೆ ತಾವು ‘ಸನಾತನಿ ಹಿಂದೂ’ ಎಂದು ಬಹಿರಂಗವಾಗಿ ಘೋಷಿಸಿದ್ದರು.
ಈ ನಡುವೆ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಅಂಶಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಬುರುಡೆ ಗ್ಯಾಂಗ್‌ನ ತನಿಖೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಪರವಾಗಿ ನಿಲುವು ಪ್ರಕಟಿಸಲು ಪವನ್ ಕಲ್ಯಾಣ್ ಬರುತ್ತಿದ್ದಾರೆ. ಇದಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವಾರು ಬಿಜೆಪಿ ನಾಯಕರೂ ಧರ್ಮಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




