ಸರ್ಕಾರ ಮೊದಲು ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ನಂತರ, ಇದೀಗ ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಂಡಿದೆ. ಅಕ್ಟೋಬರ್ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ರಾಯಚೂರಿನ ಸಿರವಾರ ತಾಲೂಕಿನ ಪಿಡಿಓ ಪ್ರವೀಣ್ ಕುಮಾರ್‌ರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಪಥಸಂಚಲನದ ವೇಳೆ ಅವರು ಕೆಪಿ ಗಣವೇಶ ಧರಿಸಿ ಲಾಟಿ ಹಿಡಿದು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಈ ಅಮಾನತು ಸರ್ಕಾರದ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಂಸದ ತೇಜಸ್ವಿ ಸೂರ್ಯ ಅವರು ಪ್ರವೀಣ್ ಕುಮಾರ್‌ರನ್ನು ಸಂಪರ್ಕಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡ ಅಧಿಕಾರಿ ಪ್ರವೀಣ್ ಕುಮಾರ್‌ರೊಂದಿಗೆ ನಾನು ಮಾತನಾಡಿದ್ದೇನೆ. ಈ ಅಕ್ರಮ ಮತ್ತು ಕಾನೂನುಬಾಹಿರ ಅಮಾನತಿಗೆ ವಿರುದ್ಧವಾಗಿ ನ್ಯಾಯಾಂಗದಲ್ಲಿ ವೈಯಕ್ತಿಕವಾಗಿ ಹೋರಾಡುವ ಭರವಸೆ ನೀಡಿದ್ದೇನೆ ಎಂದಿದ್ದಾರೆ.
ಅವರು ಮುಂದುವರೆದು, ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸರ್ಕಾರಿ ನೌಕರರ ಹಕ್ಕನ್ನು ಅನೇಕ ಹೈಕೋರ್ಟ್ ತೀರ್ಪುಗಳು ಎತ್ತಿಹಿಡಿದಿವೆ. ಈ ಅಮಾನತು ರದ್ದಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾನೂನು ಹೋರಾಟ ಬಯಸಿದರೆ, ಅದಕ್ಕೂ ನಾವು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಪಿಡಿಓ ಅಮಾನತು ಪ್ರಕರಣದ ನಂತರ, ಸಂಘ ಪರಿವಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಇನ್ನಷ್ಟು ಸರ್ಕಾರಿ ಸಿಬ್ಬಂದಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸರ್ಕಾರ ಮುಂದಾಗಿದೆ ಎಂಬ ವರದಿಗಳು ಹೊರಬಿದ್ದಿವೆ. ಇದರಿಂದ ಸರ್ಕಾರ ಮತ್ತು ಸಂಘ ಪರಿವಾರದ ಮಧ್ಯೆ ಹೊಸ ರಾಜಕೀಯ ಚರ್ಚೆ ಚುರುಕಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ