ಮಧ್ಯಪ್ರದೇಶದ ಚಿಂದ್ವಾರಾದ ಪರಾಸಿಯಾದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ, 11 ಮಕ್ಕಳು ಸಾವನ್ನಪ್ಪಿದ ಪ್ರಕರಣ ಸಂಬಂಧ, ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಎಂಬಾತನನ್ನ ಬಂಧಿಸಲಾಗಿದೆ. ಎಸ್‌ಪಿ ನೇತೃತ್ವದ ವಿಶೇಷ ತಂಡದಿಂದ ಪರಾಸಿಯಾ ಸಿವಿಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸೋನಿಯನ್ನು ಬಂಧಿಸಿದ್ದಾರೆ.
ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಡಾ. ಸೋನಿ ಅಕ್ರಮವಾಗಿ ಸಿರಪ್ ವಿತರಿಸಿದ್ದಾರೆ ಎನ್ನಲಾಗಿದೆ. ರಾಜ್‌ಪಾಲ್ ಚೌಕ್‌ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ, ಭಾರತೀಯ ದಂಡ ಸಂಹಿತೆ ಸೆಕ್ಷನ್ 276, 105 ಮತ್ತು ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯ 27A ಅಡಿಯಲ್ಲಿ ಕೇಸ್ ದಾಖಲಾಗಿದೆ. ಔಷಧ ಕಂಪನಿ ಮತ್ತು ಡಾ. ಪ್ರವೀಣ್ ಸೋನಿ ವಿರುದ್ಧ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕ್ರಮ ಕೈಗೊಳ್ಳಲಾಗಿದೆ.
ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ 11 ಮಕ್ಕಳಲ್ಲಿ 7 ಮಂದಿಗೆ ಖಾಸಗಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೆಮ್ಮೆ, ಜ್ವರ ಮತ್ತು ಶೀತಕ್ಕಾಗಿ ಕೋಲ್ಡ್ರಿಫ್ ಮತ್ತು ನೆಕ್ಸಾ-ಡಿಎಸ್ ಸಿರಪ್‌ಗಳನ್ನು ಶಿಫಾರಸು ಮಾಡಲಾಗಿತ್ತು. ಡಾ. ಸೋನಿ ಅವರು ಸಿವಿಲ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದರೂ, 15 ದಿನಗಳ ರಜೆಯಲ್ಲಿದ್ದ ವೇಳೆ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದರು.
ಕ್ಲಿನಿಕ್ ಪಕ್ಕದಲ್ಲೇ ಅಪ್ನಾ ಮೆಡಿಕಲ್ ಎಂಬ ಅಂಗಡಿಯನ್ನು ಅವರ ಪತ್ನಿ ನಡೆಸುತ್ತಿದ್ದು, ಈ ಔಷಧಗಳು ಅಲ್ಲಿಯೇ ಮಾರಾಟವಾಗುತ್ತಿದ್ದವು. ಸಾವನ್ನಪ್ಪಿದ ಮಕ್ಕಳಿಗೆ ಡಾ. ಪ್ರವೀಣ್ ಸೋನಿಯವರೇ ಔಷಧ ರೆಫರ್ ಮಾಡಿದ್ದಾಗಿ ತನಿಖೆಯಲ್ಲಿ ಬಯಲಾಗಿದೆ.