ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಲಕ್ಷಾಂತರ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿವೆ. ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕೆಂಡಕಾರುತ್ತಿದ್ದಾರೆ.
ಸಾರಿಗೆ ನೌಕರರಿಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗ್ತಿದೆ. ಪುಕ್ಸಟ್ಟೆ ದುಡಿಸಿಕೊಂಡು ದುಡ್ಡು ಕೊಡಲ್ಲ ಅನ್ನೋದು ಯಾವ ರೀತಿಯ ನ್ಯಾಯ. ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ, ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಹಿಂದಿನ ಗವರ್ನಮೆಂಟ್‌ಗಳು ಎಲ್ಲವನ್ನೂ ಕೊಡ್ತಿದ್ರು. ಈಗಿನವ್ರು ಉಚಿತ ಭಾಗ್ಯಗಳನ್ನು ಕೊಟ್ಟು, ಅನಾನುಕೂಲ ಮಾಡ್ತಿದ್ದಾರೆ. ನಮಗೆ ಉಚಿತ ಭಾಗ್ಯಗಳು ಬೇಡ. ಸರಿಯಾಗಿ ಕೆಲಸ ಮಾಡಿ ಅಂತಾ, ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕ್ತಿದ್ದಾರೆ.
ಬೆಳಗ್ಗೆ ಎದ್ದು ಬಸ್ ನಿಲ್ದಾಣಕ್ಕೆ ಬಂದೋರು, ಸೂರ್ಯ ನೆತ್ತಿ ಮೇಲೆ ಬಂದ್ರೂ ಅಲ್ಲೇ ನಿಂತಿದ್ದಾರೆ. ಕೆಲವು ಡಿಪೋಗಳಲ್ಲಿ ಬೆರಳೆಣಿಕೆಯಷ್ಷು ಬಸ್‌ಗಳು ಓಡಾಡ್ತಿವೆ. ನೈಟ್ ಶಿಫ್ಟ್ ಕೆಲಸಕ್ಕೆ ಬಂದೋರು, ಬೆಳಗ್ಗೆವರೆಗೆ ಕೆಲಸ ಮಾಡಿದ್ರು. ಸಮಯ ಕಳೆದಂತೆ ನಿಧಾನವಾಗಿ, ಆ ಬಸ್‌ಗಳೂ ಡಿಪೋ ಸೇರ್ತಿವೆ. ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಸಂಚಾರವೂ, ಬಹುತೇಕ ಸ್ಥಗಿತಗೊಂಡಿದೆ. ಡಿಪೋಗಳಲ್ಲಿ ಸರತಿ ಸಾಲಲ್ಲಿ ಬಸ್‌ಗಳು ನಿಂತಿದ್ರೆ, ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿರುವ ದೃಶ್ಯಗಳೇ ಕಾಣಿಸ್ತಿವೆ. ಬಸ್‌ಗಾಗಿ ಕಾದು ಕಾದು ಹೈರಾಣಾಗಿದ್ದಾರೆ.
ಶಕ್ತಿ ಯೋಜನೆಯನ್ನೇ ನಂಬಿ ಬಂದಿರುವ ಹೆಣ್ಮಕ್ಕಳ ಕಷ್ಟ ಕೇಳೋರೆ ಇಲ್ಲದಂತಾಗಿದೆ. ಖಾಸಗಿ ವಾಹನಗಳಲ್ಲಿ ಹೋಗೋಕೆ ದುಡ್ಡಿಲ್ಲದೇ ಕಂಗಾಲಾಗಿ, ಬಸ್ ನಿಲ್ದಾಣಗಳಲ್ಲೇ ನಿಂತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯೋಕೆ ಬಂದ ವಿದ್ಯಾರ್ಥಿಗಳು, ನಿಲ್ದಾಣಗಳಲ್ಲೇ ಕಾಲ ದೂಡುತ್ತಿದ್ದಾರೆ. ಇನ್ನು, ತುಮಕೂರು ವಿವಿ, ಕೊಪ್ಪಳ ವಿವಿಯಲ್ಲಿ ನಡೆಯಬೇಕಿದ್ದ, ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ಬಸ್‌ಗಳನ್ನೇ ಓಡಿಸಲಾಗ್ತಿದೆ. ಬಸ್ ನಿಲ್ದಾಣಗಳಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಜೊತೆಗೆ ಓಡಾಡ್ತಿರೋ ಬಸ್‌ಗಳಿಗೆ ಎಸ್ಕಾರ್ಟ್ ಭದ್ರತೆ ಭಾಗ್ಯ ಸಿಕ್ಕಿದೆ.
ಒಟ್ನಲ್ಲಿ, ಮುಷ್ಕರ ಆರಂಭಿಸಿದ ಕೆಲವೇ ಹೊತ್ತಲ್ಲಿ, ಅದರ ಬಿಸಿ ಸರ್ಕಾರಕ್ಕೆ ತಟ್ಟಿದೆ. ಈಗಾಗಲೇ ಜನಸಾಮಾನ್ಯರು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸದಿದ್ರೆ, ಸರ್ಕಾರದ ಇಮೇಜ್‌ಗೆ ಡ್ಯಾಮೇಜ್ ಆಗೋದಂತು ನಿಶ್ಚಿತ.

