ಗಡಿ ಜಿಲ್ಲೆ ಬೀದರ್ನಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದೆ. ಭಾರೀ ಗಾಳಿ, ಗುಡುಗು ಮತ್ತು ಸಿಡಿಲಿನೊಂದಿಗೆ ಸುರಿದ ಧಾರಾಕಾರ ಮಳೆ ಜನಜೀವನವನ್ನು ತತ್ತರಗೊಳಿಸಿದೆ.
ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ ಸುರಿದ ಪರಿಣಾಮ ಜನರು ಹೈರಾಣಾಗಿದ್ದಾರೆ. ಬೀದರ್, ಹುಮನಾಬಾದ್, ಔರಾದ್ ಹಾಗೂ ಬಸವಕಲ್ಯಾಣ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಲಿಕಲ್ಲು ಮಳೆ ಕಂಡುಬಂದಿದೆ.
ಇನ್ನೊಂದೆಡೆ, ಮನೆಗಳ ಮುಂದೆ ಬಿದ್ದ ಆಲಿಕಲ್ಲುಗಳನ್ನು ಕೈಯಲ್ಲಿ ಹಿಡಿದು ಮಕ್ಕಳು ಹಾಗೂ ಸ್ಥಳೀಯರು ಸಂಭ್ರಮಪಟ್ಟ ದೃಶ್ಯಗಳು ಕಂಡುಬಂದವು. ಕೆಲವರು ಆಲಿಕಲ್ಲುಗಳನ್ನು ಹಿಡಿದು ಫೋಟೋ, ವಿಡಿಯೋಗಳನ್ನು ತೆಗೆಯುತ್ತಾ ಖುಷಿಪಟ್ಟರು.
ಇತ್ತೀಚೆಗೆ ಹೆಚ್ಚಿದ ಉಷ್ಣತೆಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಈ ಮಳೆ ಸ್ವಲ್ಪ ತಂಪು ತಂದಿದ್ದರೂ, ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗುವ ಆತಂಕವೂ ಎದುರಾಗಿದೆ.
ಒಟ್ಟಾರೆ, ಅಕಾಲಿಕ ಮಳೆಯ ಅಬ್ಬರದಿಂದ ಒಂದು ಕಡೆ ತಂಪಿನ ಅನುಭವ, ಮತ್ತೊಂದೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವರದಿ : ಲಾವಣ್ಯ ಅನಿಗೋಳ




