ನವೆಂಬರ್ 2ರಂದು ಚಿತ್ತಾಪುರದಲ್ಲಿ ನಡೆಯಲು ಉದ್ದೇಶಿಸಿದ್ದ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ. ನವೆಂಬರ್ 5ರಂದು ಮತ್ತೆ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಶಾಂತಿ ಸಭೆ ನಡೆಸುವಂತೆ, ಕಲಬುರಗಿ ಹೈಕೋರ್ಟ್ ಪೀಠ ಸೂಚಿಸಿದೆ. ನವೆಂಬರ್ 7ಕ್ಕೆ ವಿಚಾರಣೆ ಮುಂದೂಡಿದ್ದು, ಶಾಂತಿ ಸಭೆಯ ವರದಿ ಸಲ್ಲಿಸುವಂತೆ ಸೂಚಿಸಿದೆ.
ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಕ್ಟೋಬರ್ 28ರಂದು ನಡೆದಿದ್ದ ಶಾಂತಿ ಸಭೆ ಬಗ್ಗೆ, ಹೈಕೋರ್ಟ್ ಪೀಠಕ್ಕೆ ಸಂಪೂರ್ಣ ಮಾಹಿತಿ ನೀಡಿದ್ರು. ಸಮಸ್ಯೆ ಬಗೆಹರಿಸುವುದಷ್ಟೇ ನಮ್ಮ ಉದ್ದೇಶ. ಶಾಂತಿ ಸಭೆಗೆ ರಿಟ್ ಅರ್ಜಿದಾರರೇ ಹಾಜರಾಗಿರಲಿಲ್ಲ. ಶೀಘ್ರವಾಗಿ ವಿವಾದ ಮುಗಿಸಲು ಅರ್ಜಿದಾರರೇ ಸಹಕರಿಸುತ್ತಿಲ್ಲ. ಶಾಂತಿ ಸಭೆಗೆ ಬೇರೆ ಬೇರೆ ವ್ಯಕ್ತಿಗಳು ಹಾಜರಾಗಿದ್ರು ಎಂಬುದಾಗಿ ಹೇಳಿದ್ರು.
ಇದಕ್ಕೆ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಉತ್ತರಿಸಿದ್ದು, ಅರ್ಜಿದಾರರ ಮನೆಯಲ್ಲಿ ಸಾವು ಸಂಭವಿಸಿದ್ದರಿಂದ ಶಾಂತಿ ಸಭೆಗೆ ಬಂದಿರಲಿಲ್ಲ. ನವೆಂಬರ್ 5ರಂದು ನಡೆಯಲಿರುವ ಶಾಂತಿ ಸಭೆಗೆ ಹಾಜರಾಗಲು ಅರ್ಜಿದಾರರು ಒಪ್ಪಿದ್ದಾರೆಂದು ಹೇಳಿದ್ರು.
ವಾದ-ಪ್ರತಿವಾದ ಆಲಿಸಿದ ಕಲಬುರಗಿ ಹೈಕೋರ್ಟ್ ಪೀಠ, ನವೆಂಬರ್ 7ಕ್ಕೆ ವಿಚಾರಣೆ ಮುಂದೂಡಿದೆ. ಇನ್ನು, ಕಲಬುರಗಿಯಿಂದ ಬೆಂಗಳೂರಿಗೆ ಶಾಂತಿ ಸಭೆ ಶಿಫ್ಟ್ ಮಾಡಲಾಗಿದ್ದು, ಶಾಂತಿ ಸಭೆ ಮಾಡುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ನವೆಂಬರ್ 5ರಂದು ಅರ್ಜಿದಾರರು, ಅವರ ವಕೀಲರೊಂದಿಗೆ ಶಾಂತಿ ಸಭೆ ನಡೆಸಲು ಸೂಚಿಸಲಾಗಿದ್ದು, ಇಂತಹ ಘಟನೆಯಾದಾಗ ಪರಿಹಾರ ಹೇಗಿರಬೇಕೆಂಬುದಕ್ಕೆ ಇದು ಮಾರ್ಗಸೂಚಿಯಾಗಬೇಕು ಎಂದು, ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರು ಸರ್ಕಾರ ತಿಳಿಸಿದ್ದಾರೆ.
ಒಟ್ನಲ್ಲಿ ನವೆಂಬರ್ 2ರ ಚಿತ್ತಾಪುರದಲ್ಲಿ ನಡೆಯಬೇಕಿದ್ದ ಆರ್ಎಸ್ಎಸ್ ಪಥಸಂಚಲನಕ್ಕೆ ಬ್ರೇಕ್ ಬಿದ್ದಿದೆ. ನವೆಂಬರ್ 5ರ ಶಾಂತಿ ಸಭೆ ಆಧರಿಸಿ ಕೋರ್ಟ್ ತೀರ್ಪು ನೀಡಲಿದೆ. ನವೆಂಬರ್ 5ರಂದು ಮಧ್ಯಾಹ್ನ 3ಗಂಟೆಗೆ ಶಾಂತಿ ಸಭೆ ನಡೆಯಲಿದೆ.

