ಅಮೆರಿಕದ ಟೆಕ್ಸಾಸ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಟ್ಯಾಲೆಂಟ್ ಕೌಂಟಿಯ ಹಿಕ್ಸ್ ಏರ್‌ಫೀಲ್ಡ್ ಬಳಿ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿ ಬೆಂಕಿಗೆ ಆಹುತಿಯಾಗಿದೆ. ಈ ಅಪಘಾತದಲ್ಲಿ ಇಬ್ಬರು ಸಜೀವ ದಹನಗೊಂಡು ಸಾವನ್ನಪ್ಪಿದ್ದಾರೆ.
ಫೋರ್ಟ್ ವರ್ತ್ ಹೊರವಲಯದ ಏರ್‌ಫೀಲ್ಡ್ ಬಳಿ ಸಣ್ಣ ವಿಮಾನವು ಹಲವು ಸೆಮಿಟ್ರೇಲರ್ ಟ್ರಕ್‌ಗಳಿಗೆ ಡಿಕ್ಕಿ ಹೊಡೆದು ತೀವ್ರ ಸ್ಫೋಟ ಸಂಭವಿಸಿದೆ. ಬೆಂಕಿಯ ಪರಿಣಾಮವಾಗಿ ಟ್ರಕ್‌ಗಳು ಸೇರಿ ಒಟ್ಟು ಐದು ವಾಹನಗಳು ಭಸ್ಮವಾಗಿವೆ.
ಹಿಕ್ಸ್ ಏರ್‌ಫೀಲ್ಡ್ ಸುತ್ತಲಿನ ವ್ಯಾಪಾರ ಸಂಕೀರ್ಣ ಮತ್ತು ಉಪನಗರ ಪ್ರದೇಶಗಳಲ್ಲಿ ಈ ದುರಂತ ನಡೆದಿದೆ. ಅಗ್ನಿಶಾಮಕ ದಳ ಹಾಗೂ ಹಲವು ತುರ್ತು ಸೇವಾ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಶ್ರಮಿಸಿದರು. ಸ್ಥಳ ಪರಿಶೀಲನೆ ವೇಳೆ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರ ಕ್ರೇಗ್ ಟ್ರೋಜಾಸೆಕ್ ತಿಳಿಸಿದ್ದಾರೆ.
ವಿಮಾನವು ಹದಿನೆಂಟು ಚಕ್ರಗಳ ಸೆಮಿಟ್ರೇಲರ್‌ಗಳು ಮತ್ತು ಕ್ಯಾಂಪರ್‌ಗಳು ನಿಲ್ಲಿಸಿದ್ದ ಪಾರ್ಕಿಂಗ್ ಪ್ರದೇಶದಲ್ಲಿ ಅಪ್ಪಳಿಸಿದ್ದು, ಕೆಲವು ವಾಹನಗಳು ವಿಮಾನದ ಜೊತೆ ಬೆಂಕಿಗೆ ಆಹುತಿಯಾಗಿದೆ. ವಾಣಿಜ್ಯ ಕಟ್ಟಡವೊಂದಿಗೂ ಬೆಂಕಿ ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ