ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕು ದೊರಕಬೇಕು ಎಂಬ ನಂಬಿಕೆಯಲ್ಲಿ ಬಡತನದ ಮಧ್ಯೆಯೂ ಧೈರ್ಯದಿಂದ ಚುನಾವಣೆಗಳಲ್ಲಿ ನಿರಂತರವಾಗಿ ಹೋರಾಡುತ್ತಿರುವ ಶಿವಪ್ಪ ಮೀಲಾಣಿ ಇತ್ತೀಚಿನ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ.
ರಾಮದುರ್ಗ ಪಟ್ಟಣದ ಶಿವಪ್ಪ ಮೀಲಾಣಿ ಪ್ಲಾಸ್ಟಿಕ್ ಆಯುವವರಾಗಿ, ಪ್ರತಿದಿನವೂ ಸಾರ್ವಜನಿಕರಿಂದ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟಮಾಡಿ ಜೀವನೋಪಾಯ ನಡೆಸುತ್ತಿದ್ದಾರೆ. ಆದರೂ ಸಮಾಜದ ಆಕರ್ಷಕ ಸನ್ನಿವೇಶಗಳ ಕಡೆಗೆ ತಿರುಗದೆ, ತಮ್ಮ ಹಕ್ಕು ಮತ್ತು ಕನಸುಗಾಗಿ ಶಾಸಕಿ, ಪಂಚಾಯತ್, ಸಹಕಾರಿ ಹಾಗೂ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನಿರಂತರವಾಗಿ ಸ್ಪರ್ಧಿಸುತ್ತಿದ್ದಾರೆ. ಸೋಲುಗಳನ್ನು ಕಂಡರೂ ಹೋರಾಟವನ್ನು ಬಿಟ್ಟಿಲ್ಲ. ಎಲ್ಲರಿಗೂ ಸ್ಪರ್ಧಿಸುವ ಹಕ್ಕು ಇದೆ ಅಂತ ಬಲವಾಗಿ ನಂಬಿದ್ದಾರೆ.
ಸೋಲು ಅಥವಾ ಗೆಲುವು ಪ್ರಜಾಪ್ರಭುತ್ವದಲ್ಲಿ ಸ್ಪರ್ಧಿಸುವುದೇ ಮುಖ್ಯ. ಹಣ ಹಂಚುವುದು ಅಥವಾ ಮತದಾರರನ್ನು, ಮತಗಳನ್ನ ಕೊಂಡುಕೊಳ್ಳುವುದು ನನ್ನ ಧೋರಣೆ ಅಲ್ಲ ಎಂದು ಅವರು ತಮ್ಮ ಧೈರ್ಯವನ್ನು ವಿವರಿಸಿದ್ದಾರೆ. ಸೆಪ್ಟೆಂಬರ್ 14ರಂದು ನಡೆದ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಪ್ರಭಾವಿ ಅಭ್ಯರ್ಥಿಗಳ ಎದುರು 678 ಮತಗಳನ್ನು ಗಳಿಸುವುದರ ಮೂಲಕ ಅವರ ಸ್ಪರ್ಧಾತ್ಮಕ ಶಕ್ತಿ ಸ್ಪಷ್ಟವಾಗಿ ತೋರಿಸಿಕೊಂಡಿದ್ದಾರೆ.
ಶಿವಪ್ಪ ಮೀಲಾಣಿ ಅವರ ರಾಜಕೀಯ ಬದುಕು ಇಂದು ನಮ್ಮ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಚುನಾವಣೆಗಳು ಹಣ, ಆಸ್ತಿ, ಜಾತಿ, ಪ್ರಭಾವದ ಸುತ್ತ ತಿರುಗುತ್ತಿರುವಾಗ, ಪ್ಲಾಸ್ಟಿಕ್ ಆಯುವ ವ್ಯಕ್ತಿಯೂ ಚುನಾವಣಾ ಅಂಗಳಕ್ಕಿಳಿಯಬಲ್ಲನೆಂಬ ಸತ್ಯವನ್ನು ಅವರು ತೋರಿಸಿದ್ದಾರೆ.ಆದರೆ, ಮತದಾರರ ಮನಸ್ಸಿನಲ್ಲಿ ಹಣದ ಪ್ರಭಾವ ಜಾತಿ ಲೆಕ್ಕಾಚಾರ ಮುಂದುವರಿದರೆ, ಇಂತಹ ಧೈರ್ಯಶಾಲಿ ಸ್ಪರ್ಧೆಗಳು ಅರ್ಥಹೀನವಾಗುತ್ತವೆ.
ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂಬುದನ್ನು ಮೀಲಾಣಿ ಅವರ ಹಾದಿ ಸಾಬೀತು ಮಾಡುತ್ತದೆ. ಶಿವಪ್ಪ ಮೀಲಾಣಿ ಕೇವಲ ಪ್ಲಾಸ್ಟಿಕ್ ಆಯುವವನಲ್ಲ. ಅವರು ಧೈರ್ಯ, ಆತ್ಮವಿಶ್ವಾಸ ಮತ್ತು ಪ್ರಜಾಪ್ರಭುತ್ವದ ಜೀವಂತ ಪಾಠ. ಅವರ ಬದುಕು ಹೇಳುತ್ತದೆ. ಮತವು ಹಣಕ್ಕಲ್ಲ, ಮೌಲ್ಯಗಳಿಗೆ ನೀಡಿದಾಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.
ಶಿವಪ್ಪ ಮೀಲಾಣಿ, ರಾಮದುರ್ಗದ ಪ್ಲಾಸ್ಟಿಕ್ ಆಯುವವರು, ಪ್ರಜಾಪ್ರಭುತ್ವದ ಮಹತ್ವವನ್ನು ತೋರಿಸುತ್ತಾ ಬಡತನದ ನಡುವೆಯೂ ನಿರಂತರವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಧೈರ್ಯ ಪ್ರಜಾಪ್ರಭುತ್ವಕ್ಕೆ ಜೀವಂತ ಪಾಠ ಅಂತಾನೆ ಹೇಳಬಹುದು.
ವರದಿ : ಲಾವಣ್ಯ ಅನಿಗೋಳ