ಅಪಾಯಕಾರಿಯಾದ ವ್ಹಿಲಿಂಗ್ ಗೆ ಪ್ರಚೋದನೆ ನೀಡುವಂತಹ ಜಾಹೀರಾತು ಪ್ರಕಟಿಸಿರುವ ಬಜಾಜ್ ಸಂಸ್ಥೆ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬಜಾಜ್ ಎಂಬ ಹೆಸರಾಂತ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ‘ಜಗ ನೋಡುತ್ತೆ ನೀನು ತೋರಿಸು’ ಎಂಬ ಶೀರ್ಷಿಕೆಯಡಿ ಪಲ್ಸರ್ ಬೈಕ್ ವ್ಹಿಲಿಂಗ್ ಮಾಡುತ್ತಿರುವ ಚಿತ್ರವನ್ನೊಳಗೊಂಡ ಜಾಹೀರಾತು ಪ್ರಕಟಿಸಿರುವುದನ್ನು ಖಂಡಿಸಿದ್ದಾರೆ.
ಇಂತಹ ಜಾಹೀರಾತುಗಳು ಯುವಕರಲ್ಲಿ ಅಪಾಯಕಾರಿ ವರ್ತನೆಗೆ ಉತ್ತೇಜನ ನೀಡುತ್ತವೆ ಎಂದು ಅವರು ಆರೋಪಿಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ವ್ಹಿಲಿಂಗ್ ಮಾಡುವ ಪ್ರವೃತ್ತಿ ಇಂದು ಸಮಾಜದಲ್ಲಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಪೊಲೀಸ್ ಅಂಕಿಅಂಶಗಳ ಪ್ರಕಾರ, ವ್ಹಿಲಿಂಗ್ ನಿಂದ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಅಮೂಲ್ಯ ಜೀವಗಳು ಕಳೆದುಕೊಳ್ಳಲಾಗುತ್ತಿದೆ.
ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿರುವುದನ್ನು ಅಂಕಿಅಂಶಗಳೇ ಸ್ಪಷ್ಟಪಡಿಸುತ್ತವೆ. ಇಂತಹ ಸಂದರ್ಭದಲ್ಲಿ ಬಜಾಜ್‌ನಂತಹ ಜವಾಬ್ದಾರಿಯುತ ಹಾಗೂ ಹೆಸರಾಂತ ಸಂಸ್ಥೆ ತನ್ನ ಉತ್ಪನ್ನದ ಜಾಹೀರಾತಿನಲ್ಲಿ ವ್ಹಿಲಿಂಗ್ ದೃಶ್ಯಗಳನ್ನು ಬಳಸುವುದು ಎಷ್ಟು ಸರಿ ಎಂದು ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಸಮಾಜದ ಮೇಲೆ ಪರಿಣಾಮ ಬೀರುವ ಜಾಹೀರಾತುಗಳ ಬಗ್ಗೆ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿರುವ ಅವರು, ಇಂತಹ ಜಾಹೀರಾತುಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




