ಸಾಮಾನ್ಯ ಜನ ಅಪರಾಧ ಮಾಡಿದ್ರೆ ತಕ್ಷಣ ಶಿಕ್ಷೆ, ನಾಯಕರಾದ್ರೆ ಜೈಲಿನಿಂದಲೂ ಅಧಿಕಾರ?– ಇಂಥ ಪ್ರಶ್ನೆಗಳು ಜನಸಾಮಾನ್ಯರ ಬಾಯಲ್ಲಿ ಸಹಜವಾಗಿ ಕೇಳಿ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ಗಂಭೀರ ಆರೋಪಗಳ ಮೇಲೆ ಬಂಧನಕ್ಕೊಳಗಾದ ಮೇಲೂ ರಾಜಕೀಯ ನಾಯಕರು ಅಧಿಕಾರದಿಂದ ರಾಜೀನಾಮೆ ನೀಡದೆ, ಕೆಲವರು ಜೈಲಿನಿಂದಲೇ ತಂತ್ರ ನುಡಿದ ಉದಾಹರಣೆಗಳು ಹೆಚ್ಚುತ್ತಿವೆ.
ಈ ಸನ್ನಿವೇಶಕ್ಕೆ ಬ್ರೇಕ್ ಹಾಕಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದ ಸಂವಿಧಾನದ 130ನೇ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ಮಸೂದೆ ಕಾನೂನಾಗಿ ಜಾರಿಗೆ ಬಂದರೆ, ಗಂಭೀರ ಅಪರಾಧಗಳಲ್ಲಿ ಬಂಧನಕ್ಕೊಳಗಾದ ಯಾವ ನಾಯಕನೂ, ಜೈಲಿನಲ್ಲಿ 30 ದಿನಗಳಿಗಿಂತ ಹೆಚ್ಚು ಕಾಲ ಇರಲಿಕ್ಕೆ ಹಾಗೆಯೇ ಅಧಿಕಾರದಲ್ಲಿಯೂ ಉಳಿಯಲಾಗುವುದಿಲ್ಲ.
ಮಸೂದೆಯ ಮುಖ್ಯ ಅಂಶಗಳು-
• ಗಂಭೀರ ಪ್ರಕರಣಗಳಲ್ಲಿ ಬಂಧನಗೊಂಡ 30 ದಿನಗಳೊಳಗೆ ಜಾಮೀನು ಸಿಗದಿದ್ದರೆ, ಅವರು ತಕ್ಷಣವಾಗಿ ರಾಜೀನಾಮೆ ನೀಡಬೇಕಾಗುತ್ತದೆ.
• 30 ದಿನದ ಒಳಗೆ ರಾಜೀನಾಮೆ ನೀಡದಿದ್ದರೆ, 31ನೇ ದಿನದಂದು ಅವರ ಸ್ಥಾನವನ್ನು ತೆರವಾಗಿದೆಯೆಂದು ಪರಿಗಣಿಸಲಿದೆ.
• ಈ ನಿಯಮವು ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯದ ಸಚಿವರಿಗೆ ಅನ್ವಯಿಸುತ್ತದೆ.
• ಐದು ವರ್ಷ ಅಥವಾ ಹೆಚ್ಚು ಶಿಕ್ಷೆಯ ತೀರ್ಪಿಗೆ ಅರ್ಹವಾಗಿರುವ ಪ್ರಕರಣಗಳಿಗೆ ಈ ಮಸೂದೆ ಅನ್ವಯವಾಗುತ್ತದೆ.
ಈ ಮಸೂದೆಯ ಕುರಿತು ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಉತ್ತಮ ಆಡಳಿತ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಈ ಮಸೂದೆ ಅಗತ್ಯವಾಗಿದೆ ಎಂದು ಹೇಳಿದರು. ಗಂಭೀರ ಅಪರಾಧಗಳ ಆರೋಪದ ಮೇಲೆ ಬಂಧಿಸಲ್ಪಟ್ಟ ಸಚಿವರು ಅಧಿಕಾರದಲ್ಲಿ ಮುಂದುವರಿದರೆ, ಅದು ಸಾಂವಿಧಾನಿಕ ಮೌಲ್ಯಗಳು ಮತ್ತು ಉತ್ತಮ ಆಡಳಿತಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಅವರು ಹೇಳಿದರು.
ಪ್ರಧಾನಿಯಾಗಿರಲಿ, ಸಚಿವರು ಅಥವಾ ಮುಖ್ಯಮಂತ್ರಿ ಬಂಧನಕ್ಕೊಳಗಾದ ನಂತರವೂ ರಾಜೀನಾಮೆ ನೀಡದ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ಬಂಧನಕ್ಕೊಳಗಾದ ನಂತರವೂ ರಾಜೀನಾಮೆ ನೀಡಿರಲಿಲ್ಲ. ಇತ್ತೀಚೆಗೆ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು ಈಗ ಈ ಮಸೂದೆ ಅಂಗೀಕಾರವಾದರೆ, ಪ್ರಧಾನಿ, ಸಚಿವರು ಅಥವಾ ಮುಖ್ಯಮಂತ್ರಿ ಬಂಧನದ ನಂತರ ತಮ್ಮ ಹುದ್ದೆಯಲ್ಲಿ ಉಳಿಯಲು ಸಾಧ್ಯವಿಲ್ಲ.
ರಾಜಕೀಯ ಕಾರಣಗಳಿಂದ ಅಥವಾ ಸುಳ್ಳು ಆರೋಪಗಳಿಂದ ಸಚಿವರು ತೊಂದರೆಗೆ ಸಿಲುಕಿ ಜೈಲಿಗೆ ಹೋಗಿರಬಹುದು, ಅಂತಹ ಸಂದರ್ಭದಲ್ಲಿ, ಅವರನ್ನು ಅವರ ಹುದ್ದೆಗಳಿಂದ ತೆಗೆದುಹಾಕುವುದು ಅನ್ಯಾಯವಾಗುತ್ತದೆ, ಆದರೆ ಈ ಮಸೂದೆಯಲ್ಲಿ ಬಂಧನದಿಂದ ಬಿಡುಗಡೆಯಾದ ನಂತರ ಅವರ ಹುದ್ದೆಯನ್ನು ಮತ್ತೆ ಪಡೆಯಬಹುದಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ