ಉಡುಪಿ ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿಯುವ ನಮೋ, ಉಡುಪಿಗೆ ಸೇನಾ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿದ್ದಾರೆ. ಪ್ರಧಾನಿಗಳ ಭೇಟಿ ಸಮಯದಲ್ಲಿ ಶಿಷ್ಟಾಚಾರ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ್ ಆದೇಶಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023, ಸೆಕ್ಷನ್ 163ರ ಅನ್ವಯ ಆದೇಶಿಸಿದ್ದಾರೆ.
3 ಹೆಲಿಕಾಪ್ಟರ್‌ಗಳು ಏಕಕಾಲಕ್ಕೆ ಆಗಮಿಸುವುದರಿಂದ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಹೆಲಿಪ್ಯಾಡನ್ನ ಆದಿಉಡುಪಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆವರಣದೊಳಗೆ ಹೊರಗೆ ವಿಶಾಲ ರಸ್ತೆ ನಿರ್ಮಿಸಲಾಗಿದೆ. ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ, ಪ್ರವಾಸಿ ಮಂದಿರದ ಸುತ್ತಮುತ್ತ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲು ಆದೇಶದಲ್ಲಿ ಸೂಚಿಸಿದ್ದಾರೆ.
ಅಲ್ಲದೇ ನವೆಂಬರ್ 28ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಇರಬೇಕು. ನವಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಿದ್ದು, ಉಡುಪಿಯನ್ನ ನೋ ಫ್ಲೈ ಝೋನ್ ಎಂದು ಘೋಷಿಸಲಾಗಿದೆ. ಇನ್ನೂ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಪ್ರಧಾನಿಗಳ ರೋಡ್ ಶೋ ವೀಕ್ಷಣೆಗೆ ಬರುವ ಅಭಿಮಾನಿಗಳು, ಸಾರ್ವಜನಿಕರಿಗೂ ಕಟ್ಟು ನಿಟ್ಟಿನ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

