ಮುಡಾ ಹಗರಣ ಬಯಲಿಗೆ ಬರ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಭೇಟಿಗೆ ಬಿಜೆಪಿ ನಾಯಕರೇ ತಿಂಗಳುಗಳ ಕಾಲ ಕಾಯ್ತಾರೆ. ಅಂತಹದ್ರಲ್ಲಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಇದ್ರೂ, ಡಿಕೆಶಿ ಒಬ್ಬರೇ ಮೋದಿ ಭೇಟಿಯಾಗಿದ್ಯಾಕೆ? ಇದು ಹೈಕಮಾಂಡ್ ನಾಯಕರನ್ನು ಕೆಂಡಾಮಂಡಲರಾಗುವಂತೆ ಮಾಡಿದೆ. ಹೈಕಮಾಂಡ್ ಕೇಳಿರೋ ಪ್ರಶ್ನೆಗಳಿಗೂ, ಡಿಕೆಶಿ ಕೊಟ್ಟಿರೋ ಉತ್ತರಕ್ಕೂ ಒಂದಕ್ಕೊಂದು ತಾಳೆ ಆಗ್ತಿಲ್ಲ. ಹಾಗಾದ್ರೆ, ಮೋದಿ-ಡಿಕೆಶಿ ಭೇಟಿ ರಹಸ್ಯವೇನು?
ರಾಜ್ಯದಲ್ಲಿ ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಹೈಕೋರ್ಟ್ನಲ್ಲಿ ರಿಟ್ ಅರ್ಜಿಯ ವಿಚಾರಣೆ ನಡೀತಿದೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರೋದು ಕಾಂಗ್ರೆಸ್ ಹೈಕಮಾಂಡ್ ಕೆರಳಿ ಕೆಂಡಾಮಂಡಲವಾಗುವಂತೆ ಮಾಡಿದೆ. ಇದಕ್ಕೆ ಕಾರಣವೂ ಕೂಡ ಗಂಭೀರವಾಗಿದೆ.
ಜುಲೈ 31ರಂದು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ದೆಹಲಿ ಪ್ರವಾಸ ಕೈಗೊಂಡಿದ್ದರು. ಸಿಎಂ ಸೇರಿದಂತೆ ಹಲವು ಸಚಿವರು, ಕೇಂದ್ರ ಸಚಿವರನ್ನು ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳ ಕುರಿತು ಮಾತುಕತೆ ನಡೆಸಿದ್ದರು. ಆದ್ರೆ, ಡಿಕೆ ಶಿವಕುಮಾರ್ ಮಾತ್ರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರೋದು, ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಸಿಎಂಗಳಿಗೆ ಮೋದಿ ಭೇಟಿಗೆ ಕಾಲ್ ಶೀಟ್ ಸಿಗೋದು ಕಷ್ಟ. ಅದ್ರಲ್ಲೂ ಕಾಂಗ್ರೆಸ್ನ ಸಿಎಂ, ಡಿಸಿಎಂಗಳು ಮೋದಿ ಭೇಟಿ ಆಗ್ಬೇಕು ಅಂದ್ರೆ, ತಿಂಗಳುಗಳ ಗಟ್ಟಲೇ ಕಾಯಬೇಕು. ಅಂತಹದ್ರಲ್ಲಿ ಡಿಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಅವರು ಭೇಟಿಗೆ ಸಮಯ ಸಿಕ್ಕಿದ್ದೇಕೆ ಅನ್ನೋ ಪ್ರಶ್ನೆ ಹೈಕಮಾಂಡ್ ನಾಯಕರನ್ನು ಕಾಡತೊಡಗಿದೆ.
ಕಾಂಗ್ರೆಸ್ ಹೈಕಮಾಂಡ್ನ ನಾಯಕರಾಗಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಡಿಕೆಶಿ- ಮೋದಿ ಭೇಟಿ ರಹಸ್ಯವನ್ನು ತಿಳಿಯಲು ಮುಂದಾಗಿದ್ದಾರೆ. ಪ್ರಧಾನಿ ಮೋದಿ ಭೇಟಿಯಾಗಿ ನಂತರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಡಿಕೆಶಿ, ರಾಜ್ಯದ ಹಣಕಾಸಿನ ವಿಚಾರ ಹಾಗೂ ಯೋಜನೆಗಳ ಕುರಿತು ಚರ್ಚಿಸಲು ಪ್ರಧಾನಮಂತ್ರಿ ಬಳಿ ಮಾತುಕತೆ ನಡೆಸಲಾಯಿತು ಎಂದು ಬರೆದುಕೊಂಡಿದ್ದರು. ಇದು ಕೂಡ ಕಾಂಗ್ರೆಸ್ ಹೈಕಮಾಂಡ್ ಅನುಮಾನಕ್ಕೆ ಕಾರಣವಾಗಿದೆ. ಡಿಕೆಶಿ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಮೋದಿ ಬಳಿ ಜಲಸಂಪನ್ಮೂಲ ಖಾತೆ ಇಲ್ಲ. ಅಲ್ಲದೇ, ಹಣಕಾಸಿನ ವಿಚಾರವನ್ನೂ ಮೋದಿ ಚರ್ಚೆ ಮಾಡಲ್ಲ. ಯಾಕಂದ್ರೆ, ರಾಜ್ಯದಲ್ಲಿ ಹಣಕಾಸು ಇಲಾಖೆ ಸಿದ್ದರಾಮಯ್ಯ ಬಳಿ ಇದೆ. ಸಿದ್ದರಾಮಯ್ಯ ಅವರೇ ಮೋದಿ ಭೇಟಿಯಾಗಿ ಚರ್ಚೆ ನಡೆಸಬೇಕು. ಅದು ಅಲ್ಲದೇ, ಹಣಕಾಸಿ ಯೋಜನೆಗಳ ಸಂಬಂಧ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಳಿ ಚರ್ಚಿಸಬೇಕು. ಹೀಗಾಗಿ, ಪ್ರಧಾನಿ ಮೋದಿ ಬಳಿ ಡಿಕೆಶಿ ಚರ್ಚೆ ನಡೆಸಿದ್ದೇನೆ ಅನ್ನೋದು ಹೈಕಮಾಂಡ್ ನಾಯಕರಿಗೆ ಯಕ್ಷ ಪ್ರಶ್ನೆಯಾಗಿದೆ.
ಇದೇ ಅನುಮಾನದ ಹಿನ್ನಲೆ ಡಿಕೆಶಿಗೆ ಹೈಕಮಾಂಡ್ 5 ಪ್ರಶ್ನೆಗಳನ್ನು ಕೇಳಿದೆ. ಅದಕ್ಕೆ ಡಿಕೆ ಶಿವಕುಮಾರ್ ಕೂಡ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಮೋದಿ ಭೇಟಿಗೆ ಸಿಎಂಗಳಿಗೆ ಟೈಮ್ ಕೊಡೋದಿಲ್ಲ. ನಿಮಗೆ ಸಿಕ್ಕಿದ್ದು ಹೇಗೆ? ನೀವೇಕೆ ಮೋದಿ ಭೇಟಿಯಾಗಿದ್ರಿ? ಅವರನ್ನು ಭೇಟಿಯಾಗಲು ಹೇಳಿದ್ದು ಯಾರು? ಅವರು ನಮ್ಮ ರಾಜಕೀಯ ಎದುರಾಳಿ ಅನ್ನೋದು ಗೊತ್ತಿರುವ ಸಂಗತಿ. ಅಂತಹದ್ರಲ್ಲಿ ಈಗ ಮೋದಿ ಭೇಟಿ ಅವಶ್ಯಕತೆ ಏನಿತ್ತು? ಸರ್ಕಾರದಲ್ಲಿ ಡಿಸಿಎಂ ಆಗಿದ್ದೀರಿ. ಇಂತಹ ಕೆಲಸ ಮಾಡಿದ್ದೇಕೆ ಎಂದು ಹೈಕಮಾಂಡ್ ಕೆಲವು ಪ್ರಶ್ನೆಗಳನ್ನ ಕೇಳಿದೆ. ಇದಕ್ಕೆ ಉತ್ತರ ಕೊಟ್ಟಿರೋ ಡಿಕೆಶಿ, ನಾನು ನನ್ನ ಇಲಾಖೆಯ ಕೆಲಸದ ವಿಚಾರವಾಗಿ ಭೇಟಿಯಾಗಿದ್ದೆ. ಇದು ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ನನ್ನ ಮೋದಿ ಭೇಟಿಗೆ ರಾಜಕಾರಣ ಬೆರೆಸುವ ಅಗತ್ಯವಿಲ್ಲ. ದೆಹಲಿ ರಾಜಕೀಯ ಬೆಳವಣಿಗೆಗೂ, ನನ್ನ ಮೋದಿ ಭೇಟಿಗೂ ಯಾವುದೇ ಸಂಬಂಧವಿಲ್ಲ ಅಂತ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಭೇಟಿ ಕೇವಲ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಮಾತ್ರವಲ್ಲ, ರಾಜ್ಯ ಬಿಜೆಪಿ ನಾಯಕರಿಗೂ ಆಶ್ಚರ್ಯ ಮೂಡುವಂತೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ನಂತರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ಜೋರಾಗುತ್ತಿರುವ ನಡುವೆಯೇ, ಹೈಕಮಾಂಡ್ ಏಜೆಂಟ್ ಗಳಾದ ರಣದೀಪ್ ಸಿಂಗ್ ಸುರ್ಜೇವಲಾ ಹಾಗೂ ಕೆ.ಸಿ.ವೇಣುಗೋಪಾಲ್ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ ಎಂದು ಅಶೋಕ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಡಿಸಿಎಂ ಡಿಕೆಶಿ ಅವರೇ, ಕಾಂಗ್ರೆಸ್ ಪಕ್ಷದ ಸಂಪ್ರದಾಯದಲ್ಲಿ ಪಲ್ಲಕ್ಕಿ ಹೊರುವವರೇ ಬೇರೆ, ಉತ್ಸವ ಮೂರ್ತಿ ಆಗುವವರೇ ಬೇರೆ. ಜೀವನವೆಲ್ಲಾ ಕಾಂಗ್ರೆಸ್ ಪಕ್ಷದ ಪಲ್ಲಕ್ಕಿ ಹೊತ್ತು ಕಡೆಗೆ ಮೂಲೆ ಗುಂಪಾದವರ ಪಟ್ಟಿ ಬಹಳ ದೊಡ್ಡದಿದೆ, ಜೋಪಾನ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರಿಂದ ಹಿಡಿದು ಪಕ್ಕದ ಆಂಧ್ರ ಪ್ರದೇಶದ ಜಗನ್ ರೆಡ್ಡಿ ಅವರವರೆಗೂ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದ ಮೇಲೆಯೇ ಮುಖ್ಯಮಂತ್ರಿ ಆಗಲಿಕ್ಕೆ ಸಾಧ್ಯವಾಗಿದ್ದು ಎಂದು ಅಶೋಕ್ ಕಾಲೆಳೆದಿದ್ದಾರೆ.
ಒಟ್ನಲ್ಲಿ ಮುಡಾ ಹಗರಣ ಹೊರಬರ್ತಿದ್ದಂತೆ ಮೋದಿ-ಡಿಕೆಶಿ ಭೇಟಿ ಮಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ, ಡಿಕೆಶಿ ನಡೆಯ ಕುರಿತು ಕಾಂಗ್ರೆಸ್ ಹೈಕಮಾಂಡ್ಗೂ ಅನುಮಾನ ಮೂಡುವಂತೆ ಮಾಡಿರೋದು ಮಾತ್ರ ಸುಳ್ಳಲ್ಲ.