Monday, December 23, 2024

Latest Posts

Modi in Ukraine: ಯುದ್ಧಪೀಡಿತ ಉಕ್ರೇನ್‌ಗೆ ನಮೋ ಭೇಟಿ: ಝೆಲೆನ್‌ಸ್ಕಿ ಅವರನ್ನು ಅಪ್ಪಿಕೊಂಡ ಮೋದಿ

- Advertisement -

ಕೈವ್: ಎರಡು ದಿನಗಳ ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಯುದ್ಧಪೀಡಿತ ಉಕ್ರೇನ್‌ನ ಕೈವ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ (Volodymyr Zelensky) ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ನಾಯಕರು ಪರಸ್ಪರ ಕೈಕುಲುಕಿ ಆಲಿಂಗನ ಮಾಡಿಕೊಂಡರು.

ಉಕ್ರೇನ್‌ನ ಕೈವ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಕೈವ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಸಮುದಾಯದವರು ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದರು. ಈ ವೇಳೆ ಅನಿವಾಸಿ ಭಾರತೀಯರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.

ಬಳಿಕ ಪ್ರಧಾನಿ ಮೋದಿ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ (Volodymyr Zelensky) ದ್ವಿಪಕ್ಷೀಯ ಮಾತುಕತೆ ನಡೆಸಿದರು. ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು. ಈ ವೇಳೆ ಉಕ್ರೇನ್​ನಲ್ಲಿ ಶಾಂತಿ ಪುನಃ ಸ್ಥಾಪನೆಗೆ ಸಹಕಾರ ನೀಡುವ ಕುರಿತು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧದ (Russia-Ukraine War) ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಯುದ್ಧ ಭೂಮಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ. ಉಕ್ರೇನ್‌ನಲ್ಲಿ ಶಾಂತಿ ಮರುಸ್ಥಾಪನೆಗೆ ಪ್ರಯತ್ನಿಸಲು ಭಾರತ ಸದಾ ಸಿದ್ಧವಾಗಿದೆ. ಕದನ ವಿರಾಮದಿಂದ ಮಾತ್ರ ಯುದ್ಧ ನಿಲ್ಲಿಸಲು ಸಾಧ್ಯ ಎಂದು ಪುನರುಚ್ಛರಿಸಿದ್ದಾರೆ.

30 ವರ್ಷಗಳ ಹಿಂದೆ ಭಾರತ-ಉಕ್ರೇನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಬಳಿಕ ಉಕ್ರೇನ್​ಗೆ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರ ಈ ಭೇಟಿ ಮಹತ್ವವನ್ನು ಪಡೆದುಕೊಂಡಿದೆ. ಇನ್ನು, ಕೆಲ ತಿಂಗಳುಗಳ ಹಿಂದಷ್ಟೇ ಮಾಸ್ಕೋಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಅವರೊಂದಿಗೆ ಮಾತುಕತೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡಿರುವುದನ್ನು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ (Volodymyr Zelensky) ಟೀಕಿಸಿದ್ದರು.

- Advertisement -

Latest Posts

Don't Miss