Tuesday, October 14, 2025

Latest Posts

‘ಸೈನಿಕ’ನ ಮೇಲೆ ಪೊಲೀಸ್‌ ಹಲ್ಲೆ : ಹೆಲ್ಮೆಟ್, ಲಾಠಿಯಿಂದ ಮನಸೋ ಇಚ್ಛೆ ಹಲ್ಲೆ?

- Advertisement -

ಸೈನಿಕ ಎಂಬ ಹೆಸರಿನ ಮೇಲೆ ಮೆಸ್ ನಡೆಸುವ ಮಾಜಿ ಸೈನಿಕನ ಮೇಲೆ ಪೊಲೀಸರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಧಾರವಾಡದ ಸಪ್ತಾಪುರದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿಯ ಡಾಲ್ಫಿನ್ ಹೋಟೆಲ್ ಪಕ್ಕದಲ್ಲೇ ಇರುವ ಸೈನಿಕ ಮೆಸ್‌ನಲ್ಲಿ ಈ ಘಟನೆ ನಡೆದಿದೆ. ಮೆಸ್ ನಡೆಸುವ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಎಂಬುವವರ ಮೇಲೆಯೇ ನಾಲ್ಕೈದು ಜನ ಪೊಲೀಸರು ಹಾಗೂ ಓರ್ವ ಎಎಸ್ಐ ಸೇರಿಕೊಂಡು ಹೆಲ್ಮೆಟ್, ಲಾಠಿ ಸೇರಿದಂತೆ ಇತರ ವಸ್ತುಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮ ಮಾಜಿ ಸೈನಿಕ ರಾಮಪ್ಪ ತೀವ್ರವಾಗಿ ಗಾಯಗೊಂಡು ಇದೀಗ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮೆಸ್‌ನಲ್ಲಿ ಊಟ ಮಾಡಲು ರಾಮಪ್ಪ ಹಾಗೂ ಇತರರು ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು ಮೆಸ್ ಇನ್ನೂ ಏಕೆ ಬಂದ್ ಮಾಡಿಲ್ಲ ಎಂದು ಏಕಾಏಕಿ ರಾಮಪ್ಪನ ಕೊರಳುಪಟ್ಟಿ ಹಿಡಿದುಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಪೊಲೀಸರು ರಾಮಪ್ಪನ ಮೇಲೆ ಹೆಲ್ಮೆಟ್, ಬಡಿಗೆಯಿಂದ ಹಲ್ಲೆ ನಡೆಸಿದರು. ಬೂಟುಗಾಲಿನಿಂದ ಎದೆಗೆ ಒದ್ದಿದ್ದಾರೆ. ರಾಮಪ್ಪನ ಹೆಂಡತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಬಾರದು ಎಂದು ಕ್ಯಾಮೆರಾಗಳನ್ನು ಕಿತ್ತೆಸಿದಿದ್ದಾರೆ. ಇನ್ನು ಪೊಲೀಸರು ಮದ್ಯಪಾನ ಮಾಡಿಯೇ ಅಲ್ಲಿಗೆ ಬಂದಿದ್ದರು ಎಂದು ಅಲ್ಲೇ ಇದ್ದ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಈ ಘಟನೆ ನಡೆದ ಬಳಿಕ ಸ್ಥಳಕ್ಕೆ ಇನ್‌ಸ್ಪೆಕ್ಟರ್ ಕೂಡ ಭೇಟಿ ನೀಡಿದ್ದರು. ಮಾಜಿ ಸೈನಿಕ ರಾಮಪ್ಪನಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅವಕಾಶ ಕೊಡದ ಪೊಲೀಸರು ಮೆಸ್‌ನಲ್ಲೇ ಇಟ್ಟುಕೊಂಡಿದ್ದಾರೆ. ನಂತರ ವಕೀಲರ ಸಹಾಯದಿಂದ ರಾಮಪ್ಪರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಯಿತು. ಈ ಘಟನೆ ಸಂಬಂಧ ನಾವು ಉಪನಗರ ಠಾಣೆಯಲ್ಲಿ ದೂರು ಸಹ ನೀಡಿದ್ದೇವೆ ಎಂದು ರಾಮಪ್ಪ ಅವರ ಸಂಬಂಧಿಕರು ತಿಳಿಸಿದ್ದಾರೆ.

ಮೆಸ್ ಬಂದ್ ಮಾಡದೇ ಇದ್ದರೆ ಸಹನೆಯಿಂದ ತಿಳಿ ಹೇಳಬೇಕಿದ್ದ ಪೊಲೀಸರೇ ರೌಡಿಗಳಂತೆ ವರ್ತಿಸಿದ್ದಾರೆ. ಈ ವೀಡಿಯೋ ಮೊಬೈಲ್‌ನಲ್ಲೂ ಸೆರೆಯಾಗಿದೆ. ಖಡಕ್ ಐಪಿಎಸ್ ಆಫೀಸರ್ ಎನಿಸಿಕೊಂಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಪೊಲೀಸರ ಈ ವರ್ತನೆಗೆ ಏನು ಹೇಳುತ್ತಾರೋ ಕಾದು ನೋಡಬೇಕಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss