ಉತ್ತರ ಕರ್ನಾಟಕದಲ್ಲಿ ಭೀಮಾ ಹಾಗೂ ಕೃಷ್ಣಾ ನದಿ ಭೋರ್ಗರೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಹಾನಿಗ್ರಸ್ತ ಪ್ರದೇಶಗಳನ್ನು ವೀಕ್ಷಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. 30ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಆಂಜನೇಯ ಸ್ವಾಮಿ ದೇವಸ್ಥಾನ, ದರ್ಗಾ ಮತ್ತು ಬಸವಣ್ಣ ದೇವಸ್ಥಾನಗಳು ನೀರಿನಲ್ಲಿ ಮುಳುಗಿವೆ. ಜನರು ತೆಪ್ಪದಲ್ಲಿ ಸಂಚರಿಸುವಂತಾಗಿದೆ. ಭೀಮನದಿ ಆರ್ಭಟಕ್ಕೆ ಬಸವೇಶ್ವರ ಮಠ ಕೂಡ ನೀರಿನಲ್ಲಿ ಮುಳುಗಿದ್ದು, ಕುತ್ತಿಗೆವರೆಗೂ ನೀರು ಬಂದರೂ ಕಾಂತಯ್ಯ ಎಂಬುವವರು ಈಜಿಕೊಂಡು ಪೂಜೆ ಸಲ್ಲಿಸಿದ್ದಾರೆ. ಪ್ರವಾಹ ಇದ್ದರೂ ಮಠದಲ್ಲಿ ಪೂಜೆ ನಿಲ್ಲಿಸಲ್ಲ ಎಂದು ಹೇಳಿದ್ದಾರೆ.
ಯಾದಗಿರಿಯ ಶಹಾಪುರ ತಾಲ್ಲೂಕಿನ ರೋಜಾ ಗ್ರಾಮ ಪ್ರವಾಹದಿಂದ ನಡುಗಡ್ಡೆಯಾಗಿ ಬಿಟ್ಟಿದೆ. ಜಾನುವಾರುಗಳಿಗೆ ಮೇವು ಕೊರತೆಯಾಗಿ ಜನರು ಬೋಟ್ ಮೂಲಕ ಮೇವು ತರುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಗೆ ರಾಯಚೂರಿನಲ್ಲೂ ಪರಿಸ್ಥಿತಿ ಹದಗೆಟ್ಟಿದ್ದು, ಹತ್ತಿ ಬೆಳೆಗಳು ಭಾರೀ ಪ್ರಮಾಣದಲ್ಲಿ ನಾಶವಾಗಿವೆ. ಎಕರೆಗೆ 20-30 ಸಾವಿರ ಖರ್ಚು ಮಾಡಿದ ರೈತರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲೂ ಘಟಪ್ರಭಾ ನದಿಯ ಅಬ್ಬರ ಮುಂದುವರಿದಿದೆ. ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಳು ಸಂಪೂರ್ಣ ಹಾನಿಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದ ಮಧ್ಯೆ ರಾಜಕೀಯ ವಾಗ್ವಾದಗಳು ತೀವ್ರಗೊಂಡಿವೆ. ಸಿಎಂ ವೈಮಾನಿಕ ಸಮೀಕ್ಷೆಗೆ ಬಿಜೆಪಿ ಕಿಡಿಕಾರಿದೆ. ವಿಪಕ್ಷ ನಾಯಕ ಆರ್. ಅಶೋಕ್, ಜನರ ಎದುರು ಬರಲು ಹೆದರಿದ ಕಾರಣ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪರಿಹಾರ ಘೋಷಿಸಿ ನಂತರ ಸಮೀಕ್ಷೆಗೆ ಬರಬೇಕಿತ್ತು ಎಂದು ಟೀಕಿಸಿದ್ದಾರೆ. ಅವರು ಈ ಸರ್ಕಾರವನ್ನು ‘ಮುಟ್ಟಾಳರ ಸರ್ಕಾರ’ ಎಂದು ಕರೆದಿದ್ದಾರೆ. ಜನರು ಪ್ರವಾಹದಿಂದ ನಲುಗುತ್ತಿರುವ ಸಂದರ್ಭದಲ್ಲಿ, ರಾಜಕೀಯ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಮುಂದುವರಿದಿದೆ.
ವರದಿ : ಲಾವಣ್ಯ ಅನಿಗೋಳ