ಧಾರವಾಡ ಜಿಲ್ಲೆಯಲ್ಲಿ ಕೆಲವು ರಾಜಕೀಯ ನಾಯಕರು ಹಾಗೂ ಜನಪ್ರತಿನಿಧಿಗಳ ಒಳಜಗಳದಿಂದಾಗಿ, ವರ್ಗಾವಣೆಯಾದರೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹೊಸ ಹುದ್ದೆಗೆ ಹಾಜರಾಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ಇವರೇ ಇಂದು ನ್ಯಾಯಕ್ಕಾಗಿ ಪರದಾಡುವಂತಾಗಿದೆ.
ಸೆಪ್ಟೆಂಬರ್ 6 ರಂದು ಗೃಹ ಇಲಾಖೆ 131 ಪೊಲೀಸರ ವರ್ಗಾವಣೆ ಆದೇಶ ಹೊರಡಿಸಿತ್ತು. ಹೀಗಾಗಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಲವಾರು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳ ಬದಲಾವಣೆ ನಡೆದಿದೆ. ಆದರೆ ರಾಜಕೀಯ ಹಸ್ತಕ್ಷೇಪದ ಕಾರಣದಿಂದಾಗಿ ಹಲವು ಸ್ಥಳಗಳಲ್ಲಿ ಹೊಸದಾಗಿ ನಿಯುಕ್ತಿಗೊಂಡ ಅಧಿಕಾರಿ ಅಧಿಕಾರ ಸ್ವೀಕರಿಸದ ಸ್ಥಿತಿ ನಿರ್ಮಾಣವಾಗಿದೆ.
ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಡಿಸೋಜಾ ಅವರು ಮಾತ್ರ ಅಧಿಕಾರ ಸ್ವೀಕರಿಸಿದ್ದು, ಉಳಿದವರೆಲ್ಲಾ ರಾಜಕೀಯ ಒತ್ತಡದಿಂದ ತಮ್ಮ ಕರ್ತವ್ಯಕ್ಕೆ ಹಾಜರಾಗಲಾಗದೇ ಪರದಾಡುತ್ತಿದ್ದಾರೆ. ಪೊಲೀಸ್ ಕಮಿಷನರ್‌ರ ಮೇಲೆ ಜನಪ್ರತಿನಿಧಿಗಳಿಂದ ಉಂಟಾಗುತ್ತಿರುವ ಒತ್ತಡದಿಂದಾಗಿ, ವರ್ಗಾವಣೆ ಆದೇಶ ಜಾರಿಯಾಗುವುದು ಸವಾಲಾಗಿ ಪರಿಣಮಿಸಿದೆ.
ಹುಬ್ಬಳ್ಳಿ ಗೋಕಲರೋಡ್ ಪೊಲೀಸ್ ಠಾಣೆ ಹುದ್ದೆಗೆ ಶಿವರುದ್ರಪ್ಪ ಮೇಟಿ ಎಂಬವರನ್ನು ವರ್ಗಾಯಿಸಿ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ಪ್ರಭಾವ ಬಳಸಿ, ಈ ನೇಮಕಾತಿಗೆ ಅಡ್ಡಿಪಡಿಸುತ್ತಿದ್ದಾರೆ. ಅವರ ಇಚ್ಛೆಯ ಪ್ರಕಾರ ಇನ್ಸ್‌ಪೆಕ್ಟರ್‌ಗೂ ಈ ಸ್ಥಾನ ಸಿಕ್ಕಿಲ್ಲ ಎಂಬ ಕಾರಣದಿಂದಾಗಿ, ನವ ನಿಯೋಜಿತ ಅಧಿಕಾರಿಗೆ ಕರ್ತವ್ಯ ಸ್ವೀಕರಿಸಲು ಅವಕಾಶ ನೀಡಲಾಗಿಲ್ಲ.
ಈ ರೀತಿಯ ರಾಜಕೀಯ ತಕರಾರು ಹಾಗೂ ಅಧಿಕಾರ ದುರ್ಬಳಕೆ, ಪೊಲೀಸ್ ವ್ಯವಸ್ಥೆಯ ಸ್ವತಂತ್ರತೆಗೆ ಭಂಗ ತಂದಿದೆ. ನ್ಯಾಯ ನೀಡುವ ಭರವಸೆ ಇರುವ ಪೊಲೀಸ್ ಇಲಾಖೆಯೇ, ಅಧಿಕಾರಿಗಳ ನ್ಯಾಯಕ್ಕಾಗಿ ಹೋರಾಟ ಮಾಡುವಂತಹ ಸ್ಥಿತಿಗೆ ತಲುಪಿರುವುದು ದುರಂತಕರವಾಗಿದೆ.
ವರದಿ : ಲಾವಣ್ಯ ಅನಿಗೋಳ

