Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ರಾಜ್ಯದಲ್ಲಿ 90 ಸಾವಿರ ಎಕರೆ ಜಮೀನು ಕಬಳಿಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದೊಂದು ಲ್ಯಾಂಡ್ ಜಿಹಾದ್ ನಡೆಯುತ್ತಿದೆ. 1500 ವರ್ಷಗಳ ಹಿಂದಿನ ಚಾಲುಕ್ಯರ ದೇವಸ್ಥಾನದ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ವಿಜಯಪುರದಲ್ಲಿ ವಿರಕ್ತಮಠದ ಜಾಗವನ್ನೂ ಕಬಳಿಸಲಾಗಿದೆ. ದೇವಸ್ಥಾನ, ಸ್ಮಶಾನ ಸೇರಿದಂತೆ ಅನೇಕ ಆಸ್ತಿ ವಕ್ಫ್ ಆಸ್ತಿಗಳಾಗಿವೆ. ಮುದ್ದೇನಹಳ್ಳಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಕಲಿತ ಶಾಲೆಯ ಆಸ್ತಿ ಕೂಡ ವಕ್ಫ್ ಹೆಸರಿಗೆ ಸೇರಿಸಲಾಗಿದೆ.
ಕಂಡಕಂಡವರ ಆಸ್ತಿ ನಮ್ಮದು ಅಂತಾ ಬೇಲಿ ಹಾಕಿಕೊಳ್ಳುವ ಅಧಿಕಾರ ಇಲ್ಲ. ನ್ಯಾಯಾಂಗ ವ್ಯವಸ್ಥೆಯನ್ನೂ ಮೀರಿ ಅಧಿಕಾರವನ್ಜ ನೀಡಿರುವುದು ಎಷ್ಟು ಸರಿ..? ಸರ್ಕಾರ ಸಂವಿಧಾನ ಬಾಹಿರವಾದಂತಹ ಕೆಲಸಕ್ಕೆ ಮುಂದಾಗಿದೆ. ವಕ್ಫ್ ಬೋರ್ಡ್ ಆಸ್ತಿ ನಮೂದು ಮಾಡುತ್ತೆ ಇದರ ಬಗ್ಗೆ ವಕ್ಫ್ ಟ್ರಿಬ್ಯುನಲ್ ಗೆ ನ್ಯಾಯ ಕೇಳಬೇಕು. ಇದು ಒಂದು ರೀತಿ ಕುರಿ ಹೋಗಿ ತೋಳದ ಮುಂದೆ ನ್ಯಾಯ ಕೇಳಿದಂತೆ ಆಗಿದೆ. ನಮ್ಮ ಹೋರಾಟ ಸಂವಿಧಾನದ ಪರ. ರಾಜ್ಯ ಸರ್ಕಾರ ಸಂವಿಧಾನದ ಪರ ಇದೆಯಾ ಅಥವಾ ಶಿರಿಯಾ ಪರ ಅನ್ನೋದನ್ನ ಸ್ಪಷ್ಟಪಡಿಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ.
ವಕ್ಫ್ ಅದಾಲತ್ ನಡೆಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಅದಾಲತ್ ನಡೆಸಿದ ಜಮೀರ್ ಅಹ್ಮದ್ ಅವರನ್ನ ಸರ್ಕಾರದಿಂದ ವಜಾಮಾಡಬೇಕು. ಭಾರತದ ಸಂವಿಧಾನದ ಯಾವ ಕಾನೂನಿನಡಿ ವಕ್ಫ್ ಗೆ ಅವಕಾಶವಿದೆ ಅನ್ನೋದನ್ನ ಸಿಎಂ ಸ್ಪಷ್ಟಪಡಿಸಬೇಕು. ಯಾವುದೇ ಆಸ್ತಿಯನ್ನ ವಕ್ಫ್ ಹೆಸರಿಗೆ ನಮೂದು ಮಾಡುವುದು ಅಪರಾಧ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ಧರಾಮಯ್ಯಗೆ ಭಸ್ಮಾಸುರನಿಗೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ.ರವಿ, ಸಿಎಂಗೆ ಅಧಿಕಾರ ನೀಡಿರುವು ಭಸ್ಮಾಸುರನ ಕೈಗೆ ಅಧಿಕಾರ ನೀಡಿದಂತಾಗಿದೆ. ವಕ್ಫ್ ಬೋರ್ಡ್ ಅನ್ನೋದು ಬಕಾಸುರನ ಹಾಗೆ. ಬಕಾಸುರನ ಹಾಗೆ ಎಲ್ಲರ ಆಸ್ತಿ ಕಬಳಿಸುವ ಕೆಲಸ ಮಾಡುತ್ತಿದೆ. ಸಿಎಂ ಸಂವಿಧಾನದ ಅಡಿ ಅಧಿಕಾರ ವಹಿಸಿದ್ದಾರೆ. ಸಿದ್ಧರಾಮಯ್ಯ ಅವರು ಸಿದ್ಧರಾಮಯ್ಯನಂತೆ ವರ್ತಿಸಬೇಕು. ಸಿದ್ರಾಮುಲ್ಲಾ ಖಾನ್ ನಂತೆ ಸಿಎಂ ವರ್ತಿಸುವುದು ಸರಿಯಲ್ಲ. ಈ ನಡೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತೆ. ರಾಜ್ಯದಾದ್ಯಂತ ನಮ್ಮ ಮೂರು ತಂಡಗಳು ಪ್ರವಾಸ ಕೈಗೊಂಡಿದೆ. ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡಿ ವಕ್ಫ್ ಆಸ್ತಿಕಬಳಿಕೆ ಬಗ್ಗೆ ವರದಿ ಪಡೆಯುತ್ತಿದ್ದೇವೆ. ರಾಜ್ಯ ಎಲ್ಲ ಜಿಲ್ಲೆಗಳಲ್ಲೂ ವರದಿ ಪಡೆದು ಕೇಂದ್ರ ಸಮೀತಿಗೆ ಸಲ್ಲಿಸಲಿದ್ದೇವೆ. ನಾವು ಜನರ ಪರ ಇದ್ದೇವೆ ಎಂದಿದ್ದಾರೆ.
ಇನ್ನು ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಸಿ.ಟಿ.ರವಿ ನಿರಾಕರಿಸಿದ್ದಾರೆ.