Friday, November 22, 2024

Latest Posts

Political News: ಅನ್ನ ಭಾಗ್ಯ ಜಾರಿಗೆ ತಂದಿದ್ದೇಕೆ ಎಂದು ವಿವರಿಸಿದ ಸಿಎಂ ಸಿದ್ದರಾಮಯ್ಯ

- Advertisement -

Political News: ಇಂದು ಸಿಎಂ ಸಿದ್ದರಾಮಯ್ಯ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಸಮಾರಂಭದಲ್ಲಿ “ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ” ಕೃತಿ ಬಿಡುಗಡೆಗೊಳಿಸಿ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೊಟ್ಟೆ ತುಂಬ ಹಿಟ್ಟು – ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ನಮಗೆ ಬಾಲ್ಯದಲ್ಲಿ ಮೊದಲು ಹೊಟ್ಟೆತುಂಬುವಷ್ಟು ಮುದ್ದೆ ಹಾಕಿ, ನಂತರ ಸ್ವಲ್ಪ ಅನ್ನ ಕೊಡೋರು. ಅನ್ನ ಉಣ್ಣಬೇಕಾದರೆ ಹಬ್ಬ ಹರಿದಿನಗಳು ಬರಬೇಕಿತ್ತು. ಬಡವರ ಮನೆ ಮಕ್ಕಳಿಗೆ ಹುಷಾರಿಲ್ಲ ಅಂದ್ರೆ ತುತ್ತು ಅನ್ನಕ್ಕಾಗಿ ಅನ್ನ ಮಾಡೋರ ಮನೆ ಮುಂದೆ ಕೈಯ್ಯೊಡ್ಡಿ ನಿಲ್ಲಬೇಕಾದ ಸ್ಥಿತಿ ಇತ್ತು. ಇವನ್ನೆಲ್ಲಾ ಕಣ್ಣಾರೆ ಕಂಡಿದ್ದ ನಾನು ನಾಡಿನ ಯಾರೊಬ್ಬರೂ ತುತ್ತು ಅನ್ನಕ್ಕಾಗಿ ಕೈವೊಡ್ಡಬಾರದೆಂದು ತೀರ್ಮಾನಿಸಿ ಅನ್ನ ಭಾಗ್ಯ ಜಾರಿಗೆ ಕೊಟ್ಟಿದ್ದೆ. ಈ ಯೋಜನೆ ಬಗ್ಗೆ ಹೊಟ್ಟೆತುಂಬಿದ ಜನ ಬಹಳಷ್ಟು ಟೀಕೆ ಟಿಪ್ಪಣಿ ಮಾಡಿದರು, ಆದರೆ ಕೊರೊನಾ ಬಂದಾಗ ಈ ಯೋಜನೆಯ ಮಹತ್ವ ಜನರ ಅರಿವಿಗೆ ಬಂತು ಎಂದು ಸಿಎಂ ನೆನಪಿಸಿಕೊಂಡಿದ್ದಾರೆ.

1949 ನವೆಂಬರ್ 25 ರಂದು ಸಂವಿಧಾನ ಜಾರಿ ಸಭೆಯಲ್ಲಿ ಬಾಬಾ ಸಾಹೇಬರು ಮಾಡಿದ ಭಾಷಣ ನನ್ನ ಗ್ಯಾರಂಟಿಗಳಿಗೆ ಸ್ಫೂರ್ತಿ.‌ ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ಧ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಗಳಿಂದ ಸಮ ಸಮಾಜದ ಆಶಯ ಈಡೇರಲ್ಲ. ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜಾರಿ ಮಾಡಿದ್ದೆ. ಜಾತಿ ಕಾರಣಕ್ಕಾಗಿ ಸಮಾಜದಲ್ಲಿ ಆರ್ಥಿಕ‌ ಅಸಮಾನತೆ ಸೃಷ್ಟಿ ಆಯಿತು. ಆದ್ದರಿಂದ ಎಲ್ಲರಿಗೂ ಆರ್ಥಿಕ ಶಕ್ತಿ ಕೊಡುವ ಕಾರಣಕ್ಕೆ 2013-18 ರ ವರೆಗೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆವು. ಹಾಗೆಯೇ ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಗ್ಯಾರಂಟಿಗಳ ಮೂಲಕ ಆರ್ಥಿಕ ಶಕ್ತಿ ನೀಡಿದೆವು ಎಂದು ತಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದ್ದಾರೆ.

ನಮ್ಮ ಭಾಗ್ಯಗಳನ್ನು, ಗ್ಯಾರಂಟಿಗಳನ್ನು ವಿರೋಧಿಗಳು ಆಡಿಕೊಂಡರು. ಈಗಲೂ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಹೋದಲ್ಲಿ ಬಂದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ನಮ್ಮ ಸರ್ಕಾರಕ್ಕೆ ಧನ್ಯತೆ ಅರ್ಪಿಸುತ್ತಿದ್ದಾರೆ. ನರೇಗಾ ಮತ್ತು ಅನ್ನಭಾಗ್ಯ ಯೋಜನೆಗಳು ಕೊರೋನಾ ಸಂದರ್ಭದಲ್ಲಿ ಬಡವರನ್ನು, ಕೆಳ ಮಧ್ಯಮ ವರ್ಗದವರನ್ನು ಬದುಕಿಸಿತು. ಹೀಗಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೆಚ್ಚೆಚ್ಚು ಮಾತಾಡಬೇಕು. ಅನ್ನಭಾಗ್ಯದ ಮೇಲೆ “ಅನ್ನ” ಅಂತಲೇ ಸಿನಿಮಾ ಬಂದಿದೆ. ನಾನೂ ಸಿನಿಮಾ ನೋಡಿದೆ, ನೀವೊಮ್ಮೆ ನೋಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

Latest Posts

Don't Miss