ಕ್ರಿಕೆಟ್‌ನಲ್ಲೂ ರಾಜಕೀಯ ಬಿಸಿ, IPL ಪ್ರಸಾರಕ್ಕೆ ಬಾಂಗ್ಲಾ ಬ್ರೇಕ್

ಬಾಂಗ್ಲಾದೇಶ ಸರ್ಕಾರವು 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯ ಪ್ರಸಾರವನ್ನು ತನ್ನ ದೇಶದಲ್ಲಿ ನಿಷೇಧಗೊಳಿಸುವ ನಿರ್ಧಾರ ಕೈಗೊಂಡಿದೆ. ಬಾಂಗ್ಲಾದ ವೇಗಿ ಮುಸ್ತಾಫಿಜುರ್ ರಹಮಾನ್ ಅವರನ್ನು BCCI ಸೂಚನೆಯ ಮೇರೆಗೆ KKR ತಂಡದಿಂದ ಕೈಬಿಟ್ಟಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಬಾಂಗ್ಲಾದೇಶ ಸರ್ಕಾರ ತಿಳಿಸಿದೆ.

ಯಾವುದೇ ಸ್ಪಷ್ಟ ಕಾರಣ ನೀಡದೆ ಮುಸ್ತಾಫಿಜುರ್ ರಹಮಾನ್ ಅವರನ್ನು IPL ನಿಂದ ಹೊರಗಿಟ್ಟಿರುವುದರಿಂದ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನೋವುಂಟಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಜನರ ಭಾವನೆಗಳು ಹಾಗೂ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು IPL ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಬಾಂಗ್ಲಾದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಕಟಣೆಗೆ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಫಿರೋಜ್ ಖಾನ್ ಸಹಿ ಮಾಡಿದ್ದಾರೆ. ಬಾಂಗ್ಲಾದೇಶ IPL ಪ್ರಸಾರವನ್ನು ನಿಷೇಧಗೊಳಿಸಿರುವುದರಿಂದ BCCI ಗೆ ದೊಡ್ಡ ಪ್ರಮಾಣದ ನಷ್ಟವೇನೂ ಆಗುವುದಿಲ್ಲ. BCCI ಹಾಗೂ ಪ್ರಸಾರ ಹಕ್ಕು ಹಂದಿರುವ ಸಂಸ್ಥೆಗೆ ಶೇ.95ರಷ್ಟು ಆದಾಯ ಭಾರತದಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುವುದರಿಂದಲೇ ಬರಲಿದೆ. ಹೀಗಾಗಿ, ಬಾಂಗ್ಲಾದ ಈ ಪ್ರತಿಭಟನೆಗೆ ಭಾರತ, BCCI ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ.

ಮೂಲಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನ ಖಂಡಿಸುವ ನಿಲುವಿನ ಭಾಗವಾಗಿ ಬಾಂಗ್ಲಾ ಆಟಗಾರರನ್ನು IPL ನಿಂದ ಹೊರಗಿಡುವ ಕುರಿತು BCCI ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ಕಳೆದ ವರ್ಷ ಪಹಲ್ಗಾಂ ಉಗ್ರ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ ಪ್ರಸಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು IPL ಪ್ರಸಾರವನ್ನು ನಿಲ್ಲಿಸಿತ್ತು. ಈ ವರ್ಷವೂ ಪಾಕಿಸ್ತಾನದಲ್ಲಿ IPL ಪ್ರಸಾರ ಅನುಮಾನದಲ್ಲಿದೆ. ಇದೀಗ ಆ ಪಟ್ಟಿಗೆ ಬಾಂಗ್ಲಾದೇಶ ಕೂಡ ಸೇರ್ಪಡೆಗೊಂಡಿದೆ.

ವರದಿ : ಲಾವಣ್ಯ ಅನಿಗೋಳ

About The Author