ವಿಧಾನಮಂಡಲ ಅಧಿವೇಶನದಲ್ಲಿ ಸಿಟಿ ರವಿ ಅವಾಚ್ಯ ಪದ ಬಳಕೆ ಆರೋಪ ಸದ್ಯ ರಾಜ್ಯದಲ್ಲಿ ಸಂಚಲನ ಮೂಡಿಸ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋ ಆಡಿಯೋ ದಾಖಲೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ.ಮಾತ್ರಲ್ಲದೇ, ಸಿಟಿ ರವಿ ವಿರುದ್ಧ ಕಾನೂನು ಸಮರ ಮುಂದುವರಿಸಿದ್ದಾರೆ . ಇನ್ನೋಂದ್ಕಡೆ ಸಿ.ಟಿ ರವಿ ಕೂಡ ಕಾನೂನು ಸಮರಕ್ಕೆ ನಿಂತಿದ್ದಾರೆ.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ” ಬಿಜೆಪಿ ಎಂಎಲ್‌ಸಿ ಸಿಟಿ ರವಿ ನಿಂದನೆ ಮಾತುಗಳಿಂದ ತುಂಬಾ ನೊಂದಿದ್ದೇನೆ. ಸಿಟಿ ರವಿ ವಿರುದ್ಧ ಕಾನೂನು ಸಮರ ಮುಂದುವರಿಸುತ್ತೇನೆ. ಕಳೆದ ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. ಕಳೆದ 26 ವರ್ಷಗಳಿಂದ ಸಂಘರ್ಷದಿಂದ ಮೇಲೆ ಬಂದಿದ್ದೇನೆ. ನಾನೇನು ರೆಡ್ ಕಾರ್ಪೆಟ್ ಮೇಲೆ ಬಂದಿಲ್ಲ ” ಅಂದಿದ್ದಾರೆ.
ಘಟನೆ ಬಳಿಕ ಸಿಟಿ ರವಿ ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ. ನಾನು ಮತ್ತೆ ಸಭಾಪತಿ ಅವರಿಗೆ ದೂರು ಕೊಡುತ್ತೇನೆ. ಸಿಟಿ ರವಿ ವಿರುದ್ಧ ಹೋರಾಟ ಮುಂದುವರಿಸುವೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ ಎಸ್ ಎಲ್ ವರದಿ ಬೇಗ ಬಹಿರಂಗವಾಗಬೇಕು. ಇಂಥ ಸಂದರ್ಭದಲ್ಲೂ ಬಿಜೆಪಿಯವರು ಸಿಟಿ ರವಿ ಬೆನ್ನಿಗೆ ನಿಂತಿದ್ದಾರೆ ಅಂತ ಹೆಬ್ಬಾಳ್ಕರ್ ಕಿಡಿಕಾರಿದರು.
ಸಿಟಿ ರವಿ ಅವರಿಗೆ ಏನಾಗಿದೆ ಗಾಯ, ಎಷ್ಟಾಗಿದೆ ಗಾಯ. ಪೊಲೀಸರು ಎನ್ ಕೌಂಟರ್ ಮಾಡುತ್ತಿದ್ದರು, ಅಂತಾರಲ್ಲಾ, ನಾಚಿಕೆ ಆಗಲ್ವ ನಿಮಗೆ. ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕು ಅದನ್ನು ಮಾಡಿದ್ದಾರೆ. ಪ್ರಕರಣದ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿಟಿ ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ, ಸಾಧ್ಯವಾದರೆ ಭೇಟಿ ಯಾಗುತ್ತೇನೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಳಸಿದ ಅಶ್ಲೀಲ ಪದ ಬಳಕೆಯ ವಿಡಿಯೋವನ್ನು ಸಚಿವರು ಮಾಧ್ಯಮಗಳ ಎದುರು ಬಿಡುಗಡೆ ಮಾಡಿದರು. ಎರಡು ಪ್ರತ್ಯೇಕ ವಿಡಿಯೋಗಳನ್ನು ಸಚಿವರು ರಿಲೀಸ್ ಮಾಡಿದರು. ಒಂದು ವಿಡಿಯೋದಲ್ಲಿ ಸಿಟಿ ರವಿ ಸಚಿವರಿಗೆ ಆಕ್ಷೇಪಾರ್ಹ ಪದ ಬಳಸಿದ್ದರೆ, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಟ್ ಅಂದಿದ್ದ ವಿಡಿಯೋವನ್ನು ಹೆಬ್ಬಾಳ್ಕರ್ ಬಿಡುಗಡೆ ಮಾಡಿದರು.
18 ಸೆಕೆಂಡ್ ಇರುವ ವಿಡಿಯೋದಲ್ಲಿ ಸಿಟಿ ರವಿ ಎದ್ದುನಿಂತುಕೊಂಡು ಪೋಸ್ಟ್ ಹಿಡಿದು ಎದುರಿಗೆ ಇರುವವರ ವಿರುದ್ಧ ಧಿಕ್ಕಾರ ಕೂಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕೊನೆಗೆ ಪ್ರಾ** ಎಂಬ ಪದವನ್ನು ಮೂರು ಬಾರಿ ಹೇಳಿದಂತೆ ಕೇಳಿಸುತ್ತದೆ. ಇನ್ನೊಂದು ವಿಡಿಯೋದಲ್ಲಿ ಹೇ ಡ್ರಗ್ ಅಡಿಟ್ ಅಂತ ಹೇಳಿರುವುದು ಕೇಳುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ನಾಯಕರು ನನಗೆ ಧೈರ್ಯ ತುಂಬಿದರು ಎಂದರು. ಸಿಟಿ ರವಿ ಬೆಳಗಾವಿ ಚಲೋ ಮಾಡುವ ಬಗ್ಗೆ ಕೇಳಿದಾಗ, ಬೆಳಗಾವಿ ಶಾಂತಿಯ ತೋಟ. ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಂಡು ಇಲ್ಲಿಗೆ ಯಾರು ಬೇಕಾದರೂ ಬರಬಹುದು. ಅಂತಹ ವ್ಯಕ್ತಿಗಳಿಗೆ ತುಂಬು ಹೃದಯದ ಸ್ವಾಗತ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.