ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ಬಡ ಕುಟುಂಬವೊಂದು ಕಳೆದ ಎರಡು ದಶಕಗಳಿಂದ ತಾತ್ಕಾಲಿಕ ಮೇಲ್ಚಾವಣಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ.
ಗ್ರಾಮದ ಸಿದ್ದಮ್ಮ ಅವರ ಕುಟುಂಬ ತೆಂಗಿನ ಗರಿಯನ್ನು ಮೇಲ್ಚಾವಣಿಯಾಗಿ ಬಳಸಿಕೊಂಡು, ಬಿರುಕು ಬಿಟ್ಟ ಮಣ್ಣಿನ ಗೋಡೆಗಳ ಮನೆಯಲ್ಲೇ ವಾಸಿಸುತ್ತಿದೆ. ಮಳೆ ಮತ್ತು ಗಾಳಿಯಿಂದ ರಕ್ಷಣೆ ಪಡೆಯಲು ಮನೆಯ ಮೇಲ್ಭಾಗವನ್ನು ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ಜೀವನ ನಡೆಸುತ್ತಿರುವುದು ಕಣ್ಣೀರಾಕಿಸುವಂತಿದೆ.
ಸುಮಾರು 20 ವರ್ಷಗಳ ಹಿಂದೆ ಭಾರೀ ಮಳೆಯಿಂದ ಮನೆ ಕುಸಿದಿದ್ದರೂ ಇದುವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಅಥವಾ ಹೊಸ ಮನೆ ಸೌಲಭ್ಯ ದೊರಕಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಕುರಿತು ಹಲವು ಬಾರಿ ನವಿಲೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಮನೆ ಮಂಜೂರು ಮಾಡಿಲ್ಲ ಎಂದು ಸಿದ್ದಮ್ಮ ಕುಟುಂಬ ಬೇಸರ ವ್ಯಕ್ತಪಡಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡದೇ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




