ನೀವು ರಿಸ್ಕ್ ಲೆಸ್ ಆಗಿ ಹೂಡಿಕೆ ಮಾಡಬೇಕಾ..? ಹೆಚ್ಚು ಆದಾಯ ಬರದಿದ್ರೂ ಪರವಾಗಿಲ್ಲ. ನಾವು ಹಾಕಿರೋ ಬಂಡವಾಳ ಸುರಕ್ಷಿತವಾಗಿರಬೇಕು ಅನ್ನೋ ಮೈಂಡ್ ಸೆಟ್ ಇರೋರಿಗೆ, ಪೋಸ್ಟ್ ಆಫೀಸ್ ಉತ್ತಮ ಆಯ್ಕೆ.
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ, ಬಂಡವಾಳವೂ ಸುರಕ್ಷಿತ ಮತ್ತು ನಿಗದಿತ ಆದಾಯ ಸರಿಯಾದ ಸಮಯಕ್ಕೆ ನಿಮ್ಮ ಕೈಸೇರುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ.
1) ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ ಬಡ್ಡಿ ದರ ಶೇಕಡ 8.20 ಇದ್ದು, ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆ ಆಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ 25 ರೂಪಾಯಿ ಆದ್ರೆ, ಗರಿಷ್ಠ ಹೂಡಿಕೆ ಮೊತ್ತ 1.5 ಲಕ್ಷ ರೂಪಾಯಿಗಳು. ಇನ್ನು ಹೂಡಿಕೆ ಅವಧಿ 15 ವರ್ಷ. 22.50 ಲಕ್ಷ ಹೂಡಿಕೆ ಮಾಡಿದ್ರೆ, ಮೆಚ್ಯೂರಿಟಿ ವೇಳೆ 69 ಲಕ್ಷದ 27 ಸಾವಿರ ರೂಪಾಯಿ ಸಿಗುತ್ತದೆ. ಸೆಕ್ಷನ್ 80 ಸಿ ಅಡಿಯಲ್ಲಿ ಇನ್ ಕಮ್ ಟ್ಯಾಕ್ಸ್ ಬೆನಿಫಿಟ್ ಇರುತ್ತದೆ.
2) ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪ್ರಸ್ತುತ ಬಡ್ಡಿ ದರ ಶೇಕಡ 7.40 ಇದ್ದು, ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆ ಆಗುತ್ತದೆ. ಕನಿಷ್ಠ 1,000 ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಗರಿಷ್ಠ ಹೂಡಿಕೆ ಮೊತ್ತ ನೋಡೋದಾದ್ರೆ, ಒಬ್ಬರು ಹೂಡಿಕೆ ಮಾಡಿದ್ರೆ 9 ಲಕ್ಷ ಮತ್ತು ಜಂಟಿ ಹೂಡಿಕೆಗೆ 15 ಲಕ್ಷ ಮಿತಿ ಇರುತ್ತದೆ. ಹೂಡಿಕೆ ಅವಧಿ 5 ವರ್ಷಗಳಾಗಿದ್ದು, ನೀವು 15 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 9,250 ರೂಪಾಯಿ ಆದಾಯ ಬರುತ್ತದೆ.
3) ಅಂಚೆ ಕಚೇರಿ ಅವಧಿ ಠೇವಣಿ (ಟೈಮ್ ಡೆಪಾಸಿಟ್)
ಅಂಚೆ ಕಚೇರಿ ಅವಧಿ ಠೇವಣಿಯನ್ನು ಟೈಮ್ ಡೆಪಾಸಿಟ್ ಅಂತಲೂ ಕರೆಯುತ್ತಾರೆ. ಪ್ರಸ್ತುತ ಬಡ್ಡಿ ದರ ಶೇಕಡ 6.9ರಿಂದ 7.59 ರಷ್ಟು ಇರುತ್ತದೆ. ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆ ಆಗುತ್ತದೆ. ಕನಿಷ್ಠ ಹೂಡಿಕೆ ಮೊತ್ತ 1,000 ರೂಪಾಯಿ ಇದ್ದರೆ, ಗರಿಷ್ಠ ಹೂಡಿಕೆ ಮೊತ್ತಕ್ಕೆ ಮಿತಿಯೇ ಇಲ್ಲ. ಹೂಡಿಕೆ ಅವಧಿ 1 ವರ್ಷ, 2 ವರ್ಷ ಮತ್ತು 4 ಅಥವಾ 5 ವರ್ಷ. ಟೈಮ್ ಡೆಪಾಸಿಟ್ ನಲ್ಲಿ 5 ವರ್ಷದ ಠೇವಣಿಗೆ ಮಾತ್ರ ಆದಾಯ ಇರುತ್ತದೆ. 5 ಲಕ್ಷ ಹೂಡಿಕೆ ಮಾಡಿದರೆ 5 ವರ್ಷಗಳ ಬಳಿಕ 7 ಲಕ್ಷದ 24 ಸಾವಿರ ಸಿಗುತ್ತದೆ.
4) ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ನಲ್ಲಿ ಪ್ರಸ್ತುತ ಬಡ್ಡಿ ದರ ಶೇಕಡ 7.70 ಇದ್ದು, ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆ ಮಾಡಲಾಗುತ್ತದೆ. ಕನಿಷ್ಠ ಹೂಡಿಕೆ ಮೊತ್ತ 1,000 ರೂಪಾಯಿ ಇದ್ದರೆ, ಗರಿಷ್ಠ ಹೂಡಿಕೆ ಮೊತ್ತಕ್ಕೆ ಮಿತಿ ಎಂಬುದಿಲ್ಲ. 5 ಲಕ್ಷ ಹೂಡಿಕೆ ಮಾಡಿದ್ರೆ, 5 ವರ್ಷಗಳ ಬಳಿಕ 7.32 ಲಕ್ಷ ವಾಪಸ್ ಸಿಗುತ್ತದೆ.
5) ಹಿರಿಯ ನಾಗರೀಕರ ಉಳಿತಾಯ ಯೋಜನೆ
ಹಿರಿಯ ನಾಗರೀಕರ ಉಳಿತಾಯ ಯೋಜನೆಯಲ್ಲಿ ಪ್ರಸ್ತುತ ಬಡ್ಡಿ ದರ ಶೇಕಡ 8.20ರಷ್ಟಿದೆ. ಇಲ್ಲಿ ಕನಿಷ್ಠ ಹೂಡಿಕೆ ಮೊತ್ತ 1,000 ರೂಪಾಯಿ ಇದ್ದರೆ, ಗರಿಷ್ಠ 30 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಹೂಡಿಕೆ ಅವಧಿ 5 ವರ್ಷಗಳಾಗಿದ್ದು, ನಾವು 30 ಲಕ್ಷ ಹೂಡಿಕೆ ಮಾಡಿದರೆ, ಬಡ್ಡಿ ಸೇರಿ 42.30 ಲಕ್ಷ ರೂ. ವಾಪಸ್ ಬರುತ್ತದೆ. ಪ್ರತಿ 3 ತಿಂಗಳಿಗೊಮ್ಮೆ 61,500 ರೂಪಾಯಿ ಆದಾಯ ನಿಮ್ಮದಾಗುತ್ತದೆ. ನಿವೃತ್ತಿ ಬಳಿಕ ಸಿಗುವ ಹಣದ ಹೂಡಿಕೆಗೆ ಸೂಕ್ತ ಜಾಗವಾಗಿದೆ.
ಒಟ್ನಲ್ಲಿ ರಿಸ್ಕ್ ಲೆಸ್ ಹೂಡಿಕೆಗೆ ಅಂಚೆ ಕಚೇರಿ ಉತ್ತಮ ಆಯ್ಕೆಯಾಗಿದೆ.