Hassan News:
ಸರ್ಕಾರಿ ಕಚೇರಿಗಳಲ್ಲಿ ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎನ್ನುವುದಕ್ಕೆ ತಾಜಾ ಉಧಾಹರಣೆ ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಅಂಚೆಕಚೇರಿ ಶಾಖೆ. ಆಧಾರ್‌ಕಾರ್ಡ್ ಮಾಡಿಕೊಡಲು, ಫೋನ್ ನಂಬರ್ ಅಪ್ಡೇಟ್ ಮಾಡಲು ಹೀಗೆ ಆಧಾರ್‌ಕಾರ್ಡ್‌ಗೆ ಸಂಬಂಧಪಟ್ಟ ಕೆಲಸ ಮಾಡಿಕೊಡಲು ಹೆಚ್ಚುವರಿ ಹಣ ಪಡೆಯುತ್ತಿದ್ದ ಅಂಚೆಇಲಾಖೆ ನೌಕರರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಾಡಿರುವ ತಪ್ಪನ್ನು ನೌಕರ ಒಪ್ಪಿಕೊಂಡಿದ್ದಾನೆ. ತಪ್ಪಿತಸ್ಥ ನೌಕರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬ್ಯಾಂಕ್ ಅಕೌಂಟ್‌ನಿಂದ ಹಿಡಿದು ಎಲ್ಲಾ ಕೆಲಸಗಳಿಗೂ ಆಧಾರ್‌ಕಾರ್ಡ್ ಬೇಕೆಬೇಕು. ಆಧಾರ್‌ಕಾರ್ಡ್ ಮಾಡಿಸಲು ಇಂದಿಗೂ ಸಾರ್ವಜನಿಕರು, ಗ್ರಾಮೀಣ ಪ್ರದೇಶದ ಜನರು, ಅವಿದ್ಯಾವಂತರು ಪರದಾಡುತ್ತಿದ್ದಾರೆ. ಉಚಿತವಾಗಿ ಆಧಾರ್‌ಕಾರ್ಡ್ ಮಾಡಿಕೊಡಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಇದನ್ನೆ ಅಂಚೆ ಇಲಾಖೆ ನೌಕರರು ಬಂಡವಾಳ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸ ಆದರೆ ಸಾಕು ಎನ್ನುವ ತರಾತುರಿಯಲ್ಲಿ ಎಷ್ಟು ಹಣ ಕೇಳಿದರು ನೀಡುತ್ತಿದ್ದಾರೆ.
ಹೀಗೆ ಮುಗ್ದ ಜನರಿಂದ ಆಧಾರ್‌ಕಾರ್ಡ್ ಮಾಡಿಕೊಡಲು, ಬಯೋಮೆಟ್ರಿಕ್ ಅಪ್‌ಡೇಟ್, ಫೋನ್ ನಂಬರ್ ಅಪ್ಡೇಟ್ ಮಾಡಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಬೇಲೂರು ಶಾಖೆ ಅಂಚೆ ಇಲಾಖೆ ನೌಕರ ಮಿಥುನ್ ಸಾರ್ವಜನಿಕರಿಂದ ಅಕ್ರಮವಾಗಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಸಾರ್ವಜನಿಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನಾರಯಣಗೌಡ ಬಣದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಣ ವಸೂಲಿ ಮಾಡಿದ್ದಕ್ಕೆ ಸಂದಾಯ ರಶೀದಿ ನೀಡದೆ ಜನರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನೌಕರ ಮಿಥುನ್ ಆಧಾರ್‌ಕಾರ್ಡ್‌ಗೆ ಫೋನ್ ನಂಬರ್ ಅಪ್ಡೇಟ್ ಮಾಡಲು 50 ರೂಪಾಯಿ ಬದಲಾಗಿ 120 ರೂ, ಉಚಿತ ಆಧಾರ್ ಕಾರ್ಡ್ ಮಾಡಿಕೊಡಬೇಕಿದ್ದರು ಅದಕ್ಕೆ ಅನಧಿಕೃತವಾಗಿ 200 ರೂ, ಬಯೊಮೆಟ್ರಿಕ್ ಅಪ್ಡೇಟ್‌ಗಾಗಿ 100 ಬದಲಾಗಿ 200 ರೂ ವಸೂಲಿ ಮಾಡುತ್ತಿದ್ದು, ಜನರು ಪ್ರಶ್ನೆ ಮಾಡಿದಾಗ ಹಣ ವಸೂಲಿ ಮಾಡುತ್ತಿರುವ ಬಗ್ಗೆ ತಪ್ಪೊಪ್ಪಿ ಕೊಂಡಿದ್ದಾನೆ. ಅಲ್ಲದೇ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿಯೂ ಹೇಳಿದ್ದಾರೆ. ಹಲವು ತಿಂಗಳಿನಿಂದ ನೌಕರ ಮಿಥುನ್ ಇದೇ ರೀತಿ ಹಣ ವಸೂಲಿ ಆರೋಪ ಕೇಳಿ ಬಂದಿದ್ದು, ತಪ್ಪಿತಸ್ಥ ನೌಕರನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸರ್ಕಾರಿ ನೌಕರರಿಗೆ ತಿಂಗಳಿಗೆ ಸರಿಯಾಗಿ ವೇತನ ಬರುತ್ತಿದ್ದರು, ಭ್ರಷ್ಟಾಚಾರದ ಮೂಲಕ ಹಣ ಸಂಪದಾನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಅದರಲ್ಲೂ ಅವಿದ್ಯಾವಂತರು, ವಯೋವೃದ್ದರು, ಬಡವರಿಂದ ಮನೋಸೋಇಚ್ಛೆ ಹಣ ವಸೂಲಿ ಮಾಡುವ ನೌಕಕರಿಗೆ ಜನರು ಛೀಮಾರಿ ಹಾಕುತ್ತಿದ್ದು, ಇಂತಹ ಭ್ರಷ್ಟ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಅಕ್ರಮ ಹಣ ಪಡೆಯುವವರಿಗೆ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ವಿಚಾರ : ಪ್ರತಾಪ್ ಸಿಂಹ ಖಡಕ್ ಉತ್ತರ