ಇನ್ಮುಂದೆ ವಿಮಾನಗಳಲ್ಲಿ ಪವರ್ ಬ್ಯಾಂಕ್, ಮೊಬೈಲ್ ಚಾರ್ಜಿಂಗ್ ಬ್ಯಾನ್… ಬ್ಯಾನ್… ಬ್ಯಾನ್… ವಿಮಾನ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಮಾನಗಳಲ್ಲಿ ಪವರ್ ಬ್ಯಾಂಕ್ ಬಳಕೆ ಕುರಿತ ನಿಯಮಗಳನ್ನು ನಾಗರಿಕ ವಿಮಾನಯಾನ ನಿಯಂತ್ರಕ ಸಂಸ್ಥೆ DGCA ಕಠಿಣಗೊಳಿಸಿದೆ. ಲಿಥಿಯಂ ಬ್ಯಾಟರಿಯಿಂದ ಉಂಟಾಗುವ ಬೆಂಕಿ ಅಪಾಯಗಳ ಹಿನ್ನೆಲೆಯಲ್ಲಿ, ವಿಮಾನದೊಳಗೆ ಪವರ್ ಬ್ಯಾಂಕ್ ಮೂಲಕ ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನ ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ.
DGCA ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ಡೆಂಜರಸ್ ಗುಡ್ಸ್ ಅಡ್ವೈಸರಿ ಸರ್ಕ್ಯುಲರ್ ಪ್ರಕಾರ, ವಿಮಾನ ಪ್ರಯಾಣದ ವೇಳೆ ಪವರ್ ಬ್ಯಾಂಕ್, ಪೋರ್ಟಬಲ್ ಚಾರ್ಜರ್‌ಗಳು ಹಾಗೂ ಲಿಥಿಯಂ ಬ್ಯಾಟರಿಗಳನ್ನು ಒಳಗೊಂಡ ಸಾಧನಗಳನ್ನು ಚೆಕ್-ಇನ್ ಲಗೇಜ್‌ನಲ್ಲಿ ಇಡುವಂತಿಲ್ಲ. ಪವರ್ ಬ್ಯಾಂಕ್‌ಗಳನ್ನು ಕೇವಲ ಹ್ಯಾಂಡ್ ಬ್ಯಾಗ್‌ನಲ್ಲಿ ಮಾತ್ರ ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಆದರೆ, ಅವುಗಳನ್ನು ವಿಮಾನದೊಳಗೆ ಬಳಸಲು ಅಥವಾ ಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ.
ಲಿಥಿಯಂ ಬ್ಯಾಟರಿಗಳು ಅತಿಯಾಗಿ ಬಿಸಿಯಾಗುವುದು, ಶಾರ್ಟ್ ಸರ್ಕ್ಯೂಟ್ ಆಗುವುದು ಅಥವಾ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇದರಿಂದ ವಿಮಾನದಲ್ಲೇ ಅಗ್ನಿ ಅವಘಡ ಸಂಭವಿಸುವ ಅಪಾಯ ಹೆಚ್ಚುತ್ತದೆ ಎಂದು DGCA ಎಚ್ಚರಿಕೆ ನೀಡಿದೆ. ಓವರ್‌ಹೆಡ್ ಸ್ಟೋವೇಜ್ ಬಿನ್‌ಗಳು ಅಥವಾ ಕ್ಯಾರಿ-ಆನ್ ಬ್ಯಾಗೇಜ್‌ನಲ್ಲಿ ಇರಿಸಲಾದ ಬ್ಯಾಟರಿಗಳಲ್ಲಿ ಬೆಂಕಿ ಉಂಟಾದರೆ, ಅದನ್ನು ತಕ್ಷಣ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಇದರಿಂದ ವಿಮಾನ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಬಹುದು ಎಂದು ತಿಳಿಸಲಾಗಿದೆ.
ಇತ್ತೀಚೆಗೆ ದಕ್ಷಿಣ ಕೊರಿಯಾದ ಗಿಮ್ಹೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಬುಸಾನ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡ ಪ್ರಕರಣದಲ್ಲೂ ಪವರ್ ಬ್ಯಾಂಕ್ ಕಾರಣವಾಗಿರಬಹುದು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಯಾವುದೇ ಎಲೆಕ್ಟ್ರಾನಿಕ್ ಸಾಧನದಿಂದ ಶಾಖ, ಹೊಗೆ ಅಥವಾ ಅಸಾಮಾನ್ಯ ವಾಸನೆ ಕಂಡುಬಂದರೆ, ಪ್ರಯಾಣಿಕರು ತಕ್ಷಣವೇ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ




